ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ, ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಕೂಡ್ಲಿಗಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಮಳೆ ಪ್ರಮಾಣವು ತೀವ್ರವಾಗಿ ಕುಂಠಿತಗೊಂಡಿದ್ದು, ಸಮಯಕ್ಕೆ ಸರಿಯಾಗಿ ಸಮರ್ಪಕ ಮಳೆಯಾಗದೆ ಇರುವ ಕಾರಣ ಕೃಷಿ ಚಟುವಟಿಕೆಗಳು ಹಾಗೂ ಜನಜೀವನದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಕೂಡ್ಲಿಗಿ ತಾಲೂಕು ಮೂಲತಃ ಕೃಷಿ ಪ್ರಧಾನ ಪ್ರದೇಶವಾಗಿದ್ದು, ತಾಲೂಕಿನ ಬಹುತೇಕ ರೈತರು ಮಳೆಯಾಧಾರಿತ ಕೃಷಿಯನ್ನೇ ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ.
ಆದರೆ, ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಆಗದಿರುವುದರಿಂದ ಬಿತ್ತನೆ ಕಾರ್ಯಕ್ಕೆ ತೀವ್ರ ತೊಂದರೆ ಉಂಟಾಗಿದೆ. ಬಿತ್ತನೆ ಮಾಡಿದ ಹಲವಾರು ಪ್ರದೇಶಗಳಲ್ಲಿ ಮಳೆಯ ಕೊರತೆಯಿಂದ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ಬೀಜ, ರಸಗೊಬ್ಬರ, ಕೃಷಿ ಕೂಲಿ ಹಾಗೂ ಇತರೆ ಕೃಷಿ ವೆಚ್ಚಗಳನ್ನು ಭರಿಸಿ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದರು.
ಮಳೆ ಕೊರತೆಯ ಪರಿಣಾಮವಾಗಿ ತಾಲೂಕಿನ ಕೆರೆ, ಕಟ್ಟೆ, ಹಳ್ಳ, ಕಾಲುವೆ ಹಾಗೂ ಇತರೆ ಜಲಮೂಲಗಳಲ್ಲಿ ನೀರಿನ ಮಟ್ಟವೂ ಗಣನೀಯವಾಗಿ ಕುಸಿದಿದೆ. ಅಂತರ್ಜಲ ಮಟ್ಟ ಕಡಿಮೆಯಾಗಿರುವುದರಿಂದ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರು ಒದಗಿಸುವುದಕ್ಕೂ ಅನೇಕ ಗ್ರಾಮಗಳಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಅಲ್ಲದೇ ತಾಲೂಕಿನ ಹಲವು ಗ್ರಾಮಗಳ ರೈತರು ತಮ್ಮ ಜೀವನೋಪಾಯಕ್ಕಾಗಿ ರಾಜ್ಯದ ಹಲವು ಪ್ರದೇಶಗಳಿಗೆ ಗುಳೆ ಹೋಗಿರುತ್ತಾರೆ. ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಸಂಪೂರ್ಣಗೊಂಡಿದ್ದು ಇದುವರೆಗೂ ಯಾವುದೇ ಕೆರೆಗಳಿಗೆ ನೀರು ಬಂದಿಲ್ಲ. ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿದೆ ಎಂದು ಪರಿಸ್ಥಿತಿ ವಿವರಿಸಿದರು.
ಈಗಾಗಲೇ ಅನೇಕ ಸಂಘಟನೆಗಳು ಹೋರಾಟದ ಮೂಲಕ ಸರ್ಕಾರಕ್ಕೆ ಕೂಡ್ಲಿಗಿ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಣೆ ಮಾಡಲು ಮನವಿ ನೀಡಿದ್ದರೂ ಸರ್ಕಾರ ಘೋಷಣೆ ಮಾಡಿರುವುದಿಲ್ಲ. ಆದ್ದರಿಂದ ಕೂಡ್ಲಿಗಿ ತಾಲೂಕಿನ ಪ್ರಸ್ತುತ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಅಧ್ಯಯನಮಾಡಿ ಮಳೆ ಮತ್ತು ಬೆಳೆ ನಷ್ಟದ ಅಂಕಿ-ಅಂಶಗಳ ಆಧಾರದ ಮೇಲೆ ಸಮಗ್ರವಾಗಿ ಪರಿಶೀಲಿಸಿ, ಕೂಡ್ಲಿಗಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಕೂಡ್ಲಿಗಿ ಪಟ್ಟಣದುದ್ದಕ್ಕೂ ಮೆರವಣಿಗೆ ನಡೆಸಿದ ಸಂಘಟನೆಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಇದರಿಂದ ರಸ್ತೆಗಳೆಲ್ಲ ಬಂದ್ ಆಗಿದ್ದು, ವಾಹನ ಸಂಚಾರದಲ್ಲಿ ಅಡೆತಡೆ ಉಂಟಾಗಿ ಸವಾರರು ಪರದಾಡಿದರು.




