ವಿಜಯನಗರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಹೊಸಪೇಟೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜೆ. ಕಾರ್ತಿಕ್ ಬಣ ಆಗ್ರಹಿಸಿದೆ.
ವಿಜಯನಗರ ಜಿಲ್ಲೆಯಲ್ಲಿ ಮುಂಗಾರು ಬಿತ್ತನೆಗೆ 3 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಮಳೆ ಕೊರತೆಯಿಂದಾಗಿ ಕೇವಲ 55,539 ಹೆಕ್ಟೇರ್ ಬಿತ್ತನೆಯಾಗಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಮಳೆ ಕೊರತೆ ಮತ್ತು ಬಿಸಿಲಿನ ತಾಪ ಹೆಚ್ಚಳದಿಂದ ಮೆಕ್ಕೆಜೋಳ, ಸೂರ್ಯಕಾಂತಿ, ಬಾಳೆ ಮತ್ತು ಕಬ್ಬುಗಳು ಒಣಗಿ ಹೋಗುತ್ತಿವೆ. ಈ ನಷ್ಟಕ್ಕಾಗಿ ಒಂದು ಎಕರೆಗೆ ರೂ. 50,000/-ಗಳಷ್ಟು ಪರಿಹಾರ ಹಣ ಘೋಷಣೆ ಮಾಡಬೇಕು ಎಂದು ಸಂಘದ ಮುಖಂಡರು ಒತ್ತಾಯಿಸಿದರು. ಸಂಘ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡುವಂತೆ ರೈತ ಮುಖಂಡರು ಆಗ್ರಹಿಸಿದರು.
ರೈತರ ಪ್ರಮುಖ ಬೇಡಿಕೆಗಳು:
ಸಂಪೂರ್ಣ ಸಾಲ ಮನ್ನಾ: ಜಿಲ್ಲೆಯ ರೈತರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಹಾಗೂ ಎಲ್ಲಾ ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕ್ಗಳಲ್ಲಿ ಮಾಡಿರುವ ಕೃಷಿ ಸಾಲವನ್ನು ಸರ್ಕಾರವು ತಕ್ಷಣವೇ ಸಂಪೂರ್ಣ ಮನ್ನಾ ಮಾಡಬೇಕು. 2022ನೇ ಸಾಲಿನಲ್ಲಿ ಕ್ರಷ್ಗೇಟ್ ಕಿತ್ತು ಹೋದ್ದರಿಂದ ತೊಂದರೆಗೀಡಾಗಿದ್ದ ರೈತರು, ಈಗ ಬರಗಾಲದ ಪರಿಸ್ಥಿತಿಯಿಂದ ಹೈರಾಣಾಗಿದ್ದಾರೆ. ರೈತರ ಸಂಕಷ್ಟ ದೂರ ಮಾಡಲು ಸರ್ಕಾರ ಮುಂದಾಗಬೇಕು.
ಮುಂಗಾರು ಮಳೆಯ ಅಭಾವದಿಂದಾಗಿ ಇಡೀ ಜಿಲ್ಲೆಯಲ್ಲಿ ಭೀಕರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರವು ವಿಜಯನಗರ ಜಿಲ್ಲೆಯನ್ನು ಅಧಿಕೃತವಾಗಿ ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು.
ವಿಜಯನಗರ ಜಿಲ್ಲೆಯಲ್ಲಿ ಈ ವರ್ಷ ಒಟ್ಟು 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ ಮಳೆಯಿಲ್ಲದೆ ಕೇವಲ 55,539 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಇನ್ನುಳಿದ ಲಕ್ಷಾಂತರ ಹೆಕ್ಟೇರ್ ಭೂಮಿ ಒಣಗಿ ಬಂಜರಾಗಿದೆ.
ಈಗಾಗಲೇ ಬಿತ್ತನೆಯಾಗಿರುವ ಅಲ್ಪಸ್ವಲ್ಪ ಜಮೀನಿನಲ್ಲೂ ತೀವ್ರ ಬಿಸಿಲು ಮತ್ತು ಬಿಸಿಗಾಳಿಯ ಹೊಡೆತಕ್ಕೆ ಸಿಲುಕಿ ಮೆಕ್ಕೆಜೋಳ, ಸೂರ್ಯಕಾಂತಿ, ಬಾಳೆ ಹಾಗೂ ಕಬ್ಬಿನ ಬೆಳೆಗಳು ಸಂಪೂರ್ಣವಾಗಿ ಬಾಡಿ, ಒಣಗಿ ಕಣ್ಣೆದುರೇ ನಾಶವಾಗುತ್ತಿವೆ. ಪ್ರತಿ ಒಂದು ಎಕರೆಗೆ ರೂ. 30,000/- ಬೆಳೆ ಪರಿಹಾರ ನೀಡಬೇಕು. ಬಿತ್ತನೆಗಾಗಿ ಸಾಲ ಮಾಡಿ ಬಂಡವಾಳ ಹೂಡಿದ್ದ ರೈತರು ಈಗ ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ವೇಳೆ ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಉಮಾದೇವಿ ಮಾತನಾಡಿ, “ವಿಜಯನಗರ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು. ಪ್ರತಿ ಹೆಕ್ಟೇರ್ಗೆ 50 ಸಾವಿರ ಪ್ರೋತ್ಸಾಹಧನ ಘೋಷಣೆ ಮಾಡಬೇಕು” ಎಂದು ಆಗ್ರಹಿಸಿದರು.
ರೈತ ಸಂಘದ ಗೌರವಾಧ್ಯಕ್ಷ ಜೆ.ಎನ್. ಕಳೆದಾಸ್ ಮಾತನಾಡಿ, “ರೈತರ ಸಾಲ ಮನ್ನಾ ಮಾಡಬೇಕು. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಭಾಗದಲ್ಲಿ ವ್ಯಾಪಕವಾದ ಬರದ ಸ್ಥಿತಿ ಇದೆ. ಡ್ಯಾಂ ಇದ್ದರೂ ಯಾವುದಕ್ಕೂ ನೀರು ಸಿಗುತ್ತಿಲ್ಲ. 21ನೇ ತಾರೀಕು ರೈತ ಹುತಾತ್ಮ ದಿನದೊಳಗೆ ಬರಗಾಲ ಘೋಷಣೆ ಮಾಡಿದ್ದರೆ ರೈತ ಸಂಘದ ವತಿಯಿಂದ ತಾಲೂಕು ಆಫೀಸ್ ಮುಂದೆ ಒಂದು ದಿನ ಉಪವಾಸ ಸತ್ಯಾಗ್ರಹ ಮಾಡಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ಹೇಮರೆಡ್ಡಿ ಮಾತನಾಡಿ, “ತುಂಗಭದ್ರಾ ಡ್ಯಾಂ ಇದ್ದರೂ ನೀರು ಬಳಕೆಗೆ ಸಿಗುತ್ತಿಲ್ಲ. ಮಳೆ ಬರದೇ ಇರುವುದರಿಂದ ಸಾಲ ಮಾಡಿ ಬಿತ್ತಿದ ಬೆಳೆಗಳು ಹಾಳಾಗಿವೆ. ವಿಜಯನಗರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ರಾಷ್ಟ್ರೀಕೃತ ಬ್ಯಾಂಕ್ಗಳು ಸೇರಿದಂತೆ ಎಲ್ಲ ಬ್ಯಾಂಕುಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು” ಎಂದು ಆಗ್ರಹಿಸಿದರು.
ಈ ವೇಳೆ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರುದ್ರಪ್ಪ ಸೇರಿದಂತೆ ಸಂಘದ ಸರ್ವ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.





