ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದ್ದು, ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ವಿಜಯಪುರ ಜಿಲ್ಲಾ ಕಾರ್ಯದರ್ಶಿ ಸಿದ್ದರಾಮ ಹಿರೇಮಠ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಇತ್ತೀಚೆಗೆ ವರದಿಯಾಗಿರುವ ಖಾಲಿ ಹುದ್ದೆಗಳ ಪ್ರಮಾಣವು ಆಘಾತಕಾರಿಯಾಗಿದೆ. ಮಂಜೂರಾಗಿರುವ 7,76,414 ಹುದ್ದೆಗಳಲ್ಲಿ 2,84,881 ಹುದ್ದೆಗಳು ಖಾಲಿ ಇವೆ. ಅಂದರೆ ಬರೋಬ್ಬರಿ ಶೇಕಡಾ 37ರಷ್ಟು ಹುದ್ದೆಗಳು ಖಾಲಿ ಇವೆ. ಸರ್ಕಾರ ಏನೆಲ್ಲಾ ಯೋಜನೆಗಳನ್ನು ಜಾರಿಗೆ ತಂದರೂ ಅವುಗಳನ್ನು ಜನರಿಗೆ ತಲುಪಿಸಲು ಅಗತ್ಯವಾದಷ್ಟು ಸಿಬ್ಬಂದಿಯೇ ಇಲ್ಲ. ಶೇಕಡ 37ರಷ್ಟು ಹುದ್ದೆಗಳು ಖಾಲಿಯಾಗಿದ್ದರೆ, ಜನರಿಗೆ ಸರ್ಕಾರಿ ಸೇವೆಗಳು ತಲುಪುವುದಾದರೂ ಹೇಗೆ? ಇರುವ ನೌಕರರ ಮೇಲೆ ಕೆಲಸದ ಹೊರೆ ಬೀಳುತ್ತದೆ”
“ಅಲ್ಲದೆ ಸೂಕ್ತ ಅರ್ಹತೆ ಹೊಂದಿರುವ ಲಕ್ಷಾಂತರ ಮಂದಿ ಯುವಜನರು ಉದ್ಯೋಗಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಖಾಲಿ ಹುದ್ದೆಗಳ ಭರ್ತಿಯ ಭರವಸೆಯನ್ನು ಸಂಪೂರ್ಣವಾಗಿ ಮರೆತಿದೆ. ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನರು ಹತಾಶೆಗೊಂಡಿದ್ದಾರೆ. ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಂಡು ಹಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ”
ಇದನ್ನೂ ಓದಿ: ವಿಜಯಪುರ | ಡಿ.ದೇವರಾಜ ಅರಸು ಜನ್ಮದಿನಾಚರಣೆ
“ಇಷ್ಟಾದರೂ ನೇಮಕಾತಿಗಳು ಮಾತ್ರ ಆಗುತ್ತಿಲ್ಲ. ಕೆಲವೇ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆಗಳು ಪ್ರಾರಂಭಗೊಂಡಿದ್ದರೂ ಅವು ಆಮೆಗತಿಯಲ್ಲಿ ಸಾಗುತ್ತಿವೆ. ಕೆಪಿಎಸ್‌ಸಿ ಮೂಲಕ ಕಳೆದ 5 ವರ್ಷಗಳಲ್ಲಿ ಪ್ರಾರಂಭಗೊಂಡು ನೆನಗುದಿಗೆ ಬಿದ್ದಿರುವ ಎಲ್ಲಾ 67 ನೇಮಕಾತಿ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಸರ್ಕಾರ ಕೇವಲ ಜನಪರ ಯೋಜನೆಗಳನ್ನು ಜಾರಿಗೆ ತಂದರಷ್ಟೇ ಸಾಲದು ಅವುಗಳನ್ನು ಕೊನೆಯ ವ್ಯಕ್ತಿಯವರೆಗೂ ತಲುಪಿಸಲು ಅಗತ್ಯವಾದ ಸಿಬ್ಬಂದಿ ವರ್ಗವನ್ನು ನೇಮಕ ಮಾಡಿಕೊಳ್ಳಬೇಕು”
“ಆದ್ದರಿಂದ ರಾಜ್ಯ ಸರ್ಕಾರವು ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಈ ಕೂಡಲೇ ಖಾಯಂ ಆಗಿ ನೇಮಕ ಮಾಡಿಕೊಳ್ಳಬೇಕು. ಉದ್ಯೋಗಕ್ಕಾಗಿ ಕಾಯುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಹೊಸ ಹುದ್ದೆಗಳನ್ನು ಸೃಷ್ಟಿಸಬೇಕು” ಎಂದು ಆಗ್ರಹಿಸಿದ್ದಾರೆ.