ವಿದ್ಯಾರ್ಥಿನಿಯರ ಸರ್ವತೋಮುಖ ಅಭಿವೃದ್ಧಿಗೆ ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ವಿಜಯನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಕಟಿಬದ್ಧವಾಗಿದೆ ಎಂದು ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಭರವಸೆ ನೀಡಿದರು.
ವಿವಿಯ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ನಾತಕೋತ್ತರ ತರಗತಿಗಳ ಪ್ರವೇಶಾತಿ ಕೌನ್ಸಿಲಿಂಗ್ ಉದ್ಘಾಟಿಸಿ ಮಾತನಾಡಿದ ಅವರು, “ವಿದ್ಯಾರ್ಥಿನಿಯರ ಜ್ಞಾನಾರ್ಜನೆಗೆ ಬೇಕಾದ ಎಲ್ಲ ಬಗೆಯ ಅವಕಾಶಗಳನ್ನು ಮಹಿಳಾ ವಿವಿ ಸೃಷ್ಟಿಸುತ್ತದೆ. ಅತ್ಯಾಧುನಿಕ ಬೋಧನಾ ತಂತ್ರಗಳು- ಸ್ಮಾರ್ಟ್ಬೋರ್ಡ್ ಮತ್ತು ಡಿಜಿಟಲ್ ಕ್ಲಾಸ್ ರೂಂ, ಮಲ್ಟಿಮೀಡಿಯಾ ಲ್ಯಾಬ್ ಮತ್ತು ಲಾಂಗ್ಲೀಷ್ ಲ್ಯಾಬ್, ಸುಸಜ್ಜಿತ ಪ್ರಯೋಗಾಲಯಗಳು, ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆ, ಸಾಪ್ಟವೇರ್ ಟೆಕ್ನಾಲಜಿ ಪಾರ್ಕ್, 24×7 ಇಂಟರ್ನೆಟ್ ಸೌಲಭ್ಯ, ಮಕ್ಕಳ ಲಾಲನೆ-ಪಾಲನೆಗೆ ಡೇಕೇರ್ ಸೆಂಟರ್. ನಗರದ ವಿವಿಧ ಭಾಗಗಳಿಂದ ವಿಶ್ವವಿದ್ಯಾಲಯಕ್ಕೆ ವಾಹನ ವ್ಯವಸ್ಥೆ ಮುಂತಾದ ಸೌಲಭ್ಯಗಳನ್ನು ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಒದಗಿಸಲಾಗಿದೆ” ಎಂದು ವಿವರಿಸಿದರು.
“ಮಹಿಳೆಯರಿಗೆ ಉನ್ನತ ಶಿಕ್ಷಣದ ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಸಮಗ್ರ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಅದು ತನ್ನದೇ ಹಾದಿಯಲ್ಲಿ ಹೊಸ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಮಹಿಳಾ ಸಬಲೀಕರಣಕ್ಕಾಗಿ ಹತ್ತು ಹಲವು むる ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದೆ. ಮಹಿಳೆಯರ ಜ್ಞಾನ ಸಂಪಾದನೆ, ಸಂಸ್ಕೃತಿ, ಸಂಪನ್ನತೆಯನ್ನು ಹೆಚ್ಚಿಸಲು ನಿರಂತರವಾಗಿ ತುಡಿಯುತ್ತಿದೆ. ಅಷ್ಟೇ ಅಲ್ಲ, ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ, ಸಾಮಾಜಿಕ ಉನ್ನತಿಗೂ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುತ್ತಿದೆ. ಇದರ ಪ್ರಯೋಜನಗಳನ್ನು ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕು” ಎಂದರು.
“ಮಹಿಳಾ ವಿವಿಯ ಒಂದು ಕೋರ್ಸ್ಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿನಿಯರು ಆ ಕೋರ್ಸ್ನಲ್ಲಿ ಪ್ರವೇಶ ಸಿಗದಿದ್ದಾಗ ನಿರಾಶರಾಗಬೇಕಾಗಿಲ್ಲ. ಇದೇ ವಿವಿಯ ಇನ್ನೊಂದು ವಿಭಾಗದಲ್ಲಿ ಪ್ರವೇಶ ಪಡೆದುಕೊಂಡು ಅಧ್ಯಯನ ಮುಂದುವರೆಸಿದಲ್ಲಿ ಒಳ್ಳೆಯ ವೃತ್ತಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ” ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ | ಸೆ.3ರಿಂದ ರಾಜ್ಯಾದ್ಯಂತ ಸೀರತ್ ಅಭಿಯಾನ
ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, “ಮಹಿಳೆಯರು ಸುಲಭವಾಗಿ, ಆಕರ್ಷಕವಾಗಿ ಮತ್ತು ಕೈಗೆಟುಕುವ ದರದಲ್ಲಿ ಉನ್ನತ ಶಿಕ್ಷಣ ಪಡೆಯಲು ಸೂಕ್ತ ವಾತಾವರಣ ನಿರ್ಮಾಣ ಮಾಡುವಲ್ಲಿ ಮಹಿಳಾ ವಿಶ್ವವಿದ್ಯಾಲಯ ಹಲವಾರು ಕ್ರಮಗಳನ್ನು ಕೈಕೊಂಡಿದೆ. ಸ್ನಾತಕೋತ್ತರ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿನಿಯರಿಗೆ ಹಲವಾರು ಉದ್ಯೋಗವಕಾಶಗಳು ಲಭ್ಯವಿದೆ ಎಂದು ಹೇಳಿದ ಅವರು, ಜ್ಞಾನ ಸಂಪಾದಿಸುವ ಆಸಕ್ತಿಯುಳ್ಳ ಮಹಿಳೆಯರು, ಉನ್ನತ ಶಿಕ್ಷಣವನ್ನು ಪಡೆಯುವ ಹಂಬಲ ಮತ್ತು ಬಲವನ್ನು ಹೊಂದಿದವರಿಗೆ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ವಿಶಿಷ್ಟ ರೀತಿಯ ಪಠ್ಯಕ್ರಮವನ್ನು ರೂಪಿಸಲಾಗಿದೆ. ಇಲ್ಲಿನ ವಿದ್ಯಾರ್ಥಿನಿಯರು ತಾವು ಓದುತ್ತಿರುವ ಕೋರ್ಸ್ನ ವಿಷಯಗಳಲ್ಲದೇ ಇತರ ವಿಷಯಗಳಲ್ಲಿ ಒಂದೊಂದು ವಿಷಯವನ್ನು ಓದುವ ಅವಕಾಶ ಕಲ್ಪಿಸಲಾಗಿದೆ” ಎಂದರು.
ಈ ವೇಳೆ ಮೌಲ್ಯಮಾಪನ ಕುಲಸಚಿವ ಪ್ರೊ. ಬಿ ಎಲ್ ಲಕ್ಕಣ್ಣವರ, ವಿವಿಧ ನಿಕಾಯಗಳ ಡೀನರುಗಳಾದ ಪ್ರೊ. ಸಕ್ಸಾಲ್ ಹೂವಣ್ಣ, ಪ್ರೊ. ರಮೇಶ ಕೆ, ಪ್ರೊ. ಆರ್ ವಿ ಗಂಗಶೆಟ್ಟಿ, ಪ್ರೊ. ರಾಜು ಬಾಗಲಕೋಟೆ, ಪ್ರೊ. ಅನಿತಾ ನಾಟೀಕರ್, ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶಾತಿ ಸಮಿತಿ ಅಧ್ಯಕ್ಷ ಪ್ರೊ. ಪಿ ಜಿ ತಡಸದ, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಅಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿನಿಯರು ಮತ್ತು ಪಾಲಕರು ಉಪಸ್ಥಿತರಿದ್ದರು.