ಮೋದಿ ಸರ್ಕಾರದ ಸುಳ್ಳು ಭರವಸೆ, ಭಾವನೆ ಕೆರಳಿಸುವ ವಿಚಾರ ಬೇಕೋ ಕಾಂಗ್ರೆಸ್ ಪಕ್ಷದ ಕಳಕಳಿ ಯೋಜನೆಗಳು ಬೇಕೊ ನೀವೇ ನಿರ್ಧರಿಸಿ ಎಂದು ಶಾಸಕ ಹಾಗೂ ಸಾಬೂನು-ಮಾರ್ಜಕ ನಿಗಮದ ಆಧ್ಯಕ್ಷರಾದ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಮಿಣಜಗಿಯಲ್ಲಿ ಮಂಗಳವಾರ (ಏ.16) ನಡೆದ ಜಿಪಂ ವ್ಯಾಪ್ತಿಯ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನುಡಿದಂತೆ ನಡೆದುಕೊಂಡು ಹೆಣ್ಣುಮಕ್ಕಳ, ಯುವಕರ ಮನಸ್ಸು ಗೆದ್ದಿದೆ. ಕೆಲವೇ ತಿಂಗಳಲ್ಲಿ ಹೇಳಿದ್ದ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದೆ. ಮೋದಿ ನೀಡಿದ್ದ ಯಾವೊಂದು ಮಾತನ್ನೂ ಉಳಿಸಿಕೊಂಡಿಲ್ಲ. ಬದಲಾಗಿ ದೇಶಕ್ಕೆ ಆರ್ಥಿಕ ಸಂಕಷ್ಟ ತಂದೊಡ್ಡಿದ್ದಾರೆ ಎಂದು ಹೇಳಿದರು.
ವಿದ್ಯಾವಂತ, ಪ್ರಬುದ್ಧ ಅಭ್ಯರ್ಥಿ ರಾಜು ಆಲಗೂರರಿಗೆ ಮತ ನೀಡಿದರೆ ಅದು ವ್ಯರ್ಥವಾಗುವುದಿಲ್ಲ. ದಶಕಗಳ ಮೇಲಾಯ್ತು ಲೋಕಸಭೆಯಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಕಾರಣ ಏನೇ ಇರಲಿ, ಇದೀಗ ನಮ್ಮ ಲೋಕಸಭೆ ಸದಸ್ಯ ಹೇಗಿರಬೇಕು ನೀವು ನಿರ್ಧರಿಸಬೇಕು. ನೀವು ನೀಡಿದ ಮತ ಸಮಾನತೆ, ಸಾಮರಸ್ಯ, ಸುಭದ್ರತೆ ಹಾಗೂ ಅಭಿವೃದ್ಧಿಗೆ ಎಂದು ಹೇಳಿದರು.
ಕೃಷ್ಣಾ ನದಿ ನೀರಿನ ಹಂಚಿಕೆ ಬಗೆಹರಿಸಲಿಲ್ಲ. ಯಾವೊಂದು ಜ್ವಲಂತ ಸಮಸ್ಯೆಗಳನ್ನು ಬಿಜೆಪಿಯವರು ಬಗೆಹರಿಸಲಿಲ್ಲ. ನೀರಿನ ಬಳಕೆ ಸರಿಯಾಗಿದ್ದರೆ ನಮ್ಮ ಬದುಕು ಬಂಗಾರವಾಗುತ್ತಿತ್ತು. ಒಂದೆಡೆ ರಾಜ್ಯ ಸರಕಾರ ಅನೇಕ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದೆ. ಕೇಂದ್ರ ಸರಕಾರ ರಾಜ್ಯಕ್ಕೆ ನೆಟ್ಟಗಿನ ಬರ ಪರಿಹಾರ ಕೊಡಲಿಲ್ಲ ಕೋರ್ಟ್ ಛೀಮಾರಿ ಹಾಕುವ ಪ್ರಸಂಗ ಒದಗಿತು. ನೀರಿನ ಪಾಲೂ ಇಲ್ಲ. ಗಡಿ ವಿವಾದವೂ ಬಗೆಹರಿಸಲಿಲ್ಲ. ದೇಶದೆಲ್ಲೆಡೆ ವಿಪ್ಲವ ಪರಿಸ್ಥಿತಿ ಇದೆ. ಇಂತಹ ಮೋದಿಯವರ ಸರಕಾರ ನಮಗೆ ಬೇಕೆ? ದೇವರ ಹೆಸರೇಳಿ ಅಧಿಕಾರ ಮಾಡುತ್ತಾರೆ ಇವರಿಗೆ ನಾಚಿಕೆ ಇಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ಉದ್ಯೋಗ, ಮೂಲಭೂತ ಸಮಸ್ಯೆ ನೀಗಿಸದೇ ದೇಶ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಆರ್ಥಿಕ ದಿವಾಳಿತನ ಸೃಷ್ಟಿಸಿದೆ. ಹಾಗಾಗಿ ಕಾಂಗ್ರೆಸ್ ನಮಗೆ ಅನಿವಾರ್ಯವಾಗಿದೆ. ಇಂದಿನ ಯುವಕರಿಗೆ ಬುದ್ಧಿ ಹೇಳಿ ಭ್ರಷ್ಟ, ಸುಳ್ಳಿನ ಕೇಂದ್ರ ಸರ್ಕಾರವನ್ನು ಓಡಿಸಬೇಕು. ನಲವತ್ತು ಸಾವಿರ ಕೋಟಿ ರೂ.ಗಳನ್ನು ಬಾಂಡ್‌ಗಳ ಮೂಲಕ ಸಂಗ್ರಹಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಗಟ್ಟಿತನದಿಂದ ಇದು ಹೊರಬಂತು. ಇದರಿಂದ ಸ್ವಚ್ಛತೆ ಮುಖ ಹಾಕಿದವರು ಬಯಲಾಗಿ ಹತಾಶೆಗೊಂಡಿದ್ದಾರೆ. ಅದಕ್ಕಾಗಿ ಬಸವೇಶ್ವರ ಹಾಗೂ ಅಂಬೇಡ್ಕರ್‌ರ ದಾರಿಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಹೇಳಿದರು.
ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ನಮ್ಮ ಗ್ಯಾರಂಟಿಗಳನ್ನೇ ದೇಶದೆಲ್ಲೆಡೆ ಕಾಪಿ ಮಾಡಲಾಗುತ್ತಿದೆ. ಗ್ಯಾರಂಟಿಗಳಿಂದ ದೇಶ ದಿವಾಳಿ ಆಗುತ್ತೆ ಎಂದು ಟೀಕಿಸಿದ ಮೋದಿಯವರೇ ‘ಮೋದಿ ಗ್ಯಾರಂಟಿ’ ಎಂದು ಪ್ರಚಾರ ಪಡೆಯುತ್ತಿರುವುದು ವಿಪರ್ಯಾಸ. ಇಲ್ಲಿನ ಬಿಜೆಪಿ ಸಂಸದ ಕಳೆದ ಹದಿನೈದು ವರ್ಷಗಳ ಅಧಿಕಾರ ಅನುಭವಿಸಿದರೇ ಹೊರತು ಏನೊಂದು ಕೆಲಸ ಮಾಡಲಿಲ್ಲ ಎಂದರು.
ನೀವು ನನ್ನ ಮೇಲೆ ವಿಶ್ವಾಸ ಇಟ್ಟರೆ ನಿಮ್ಮ ಜೀತದ ಆಳಾಗಿ ದುಡಿಯುತ್ತೇನೆ. ಜಿಲ್ಲೆಗೆ ಬೇಕಿರುವ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತೇನೆ. ಈ ಸಲ ಜಿಲ್ಲೆಗಾಗಿ ಬದಲಾವಣೆ ಮಾಡಿ. ನನಗೆ ಕೊಡುವ ಮತ ನಾಡಗೌಡರಿಗೆ, ಸಿದ್ದರಾಮಯ್ಯರ ಕಾಳಜಿಗೆ ಎಂದು ಮನವಿ ಮಾಡಿದರು.
ಶಿವಶಂಕರಗೌಡ ಹಿರೇಗೌಡ ಪ್ರಸ್ತಾವಿಕ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಾಫಲ್ಯತೆ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಭರವಸೆಗಳನ್ನು ವಿವರಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಎಸ್.ಹುಲ್ಲೂರ ಮಾತನಾಡಿ, ತಕ್ಕಡಿಯಲ್ಲಿ ತೂಗಿ ಯಾರಿಂದ ಕೆಲಸವಾಗುತ್ತದೆ ಎಂದು ಯೋಚಿಸಿ ಅವರಿಗೆ ನಿಮ್ಮ ಪವಿತ್ರ ಮತ ನೀಡಿ ಎಂದು ಕೋರಿದರು.
ಹಿರಿಯ ಮುಖಂಡರಾದ ಬಿ.ಎಸ್. ಪಾಟೀಲ ಯಾಳಗಿ, ಶಕೀಲ್ ಖಾಜಿ, ಅಕ್ಕಮಹಾದೇವಿ ಕಟ್ಟಿಮನಿ, ಸಿದ್ದನಗೌಡ ಪಾಟೀಲ, ಸಿ.ಬಿ.ಅಸ್ಕಿ, ಕಾಶೀಂ ಪಟೇಲ, ಜೆ.ಬಿ. ಪಾಟೀಲ, ಅಶೋಕಗೌಡ ಪಾಟೀಲ, ಬಸವನಗೌಡ ಬಗಲಿ, ಶಿವಾನಂದಯ್ಯ ಹಿರೇಮಠ, ಐ.ಜಿ.ಯರನಾಳ ಅನೇಕರಿದ್ದರು.
