ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ಹೃದಯ ಭಾಗದಲ್ಲಿರುವುದು ಕರ್ನಾಟಕ ಮಾದರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ 1910ರಲ್ಲಿ ಆರಂಭವಾದ ಈ ಶಾಲೆ, ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎನ್ನುವ ಹಾಗೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದೆ. ಸಹಸ್ರಾರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿರುವ ಶಾಲೆ, ಈಗ ನಾಲ್ಕೈದು ವರ್ಷಗಳಿಂದ ಗಂಡು ಮಕ್ಕಳನ್ನು ಒಳಗೊಂಡ ‘ಕೊ ಎಜುಕೇಶನ್’ ಶಾಲೆಯಾಗಿ ಮಾರ್ಪಟ್ಟಿದೆ. ಆದರೆ, ಶತಮಾನ ಪೂರೈಸಿರುವ ಈ ಶಾಲೆ, ಹಲವಾರು ಕುಂದುಕೊರತೆಗಳಿಂದ ಬಳಲುತ್ತಿದೆ.
ಶಾಲೆಯು 6 ಕೋಠಡಿಗಳನ್ನು ಹೊಂದಿದೆ. 180 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 9 ಶಿಕ್ಷಕರಿದ್ದಾರೆ. ಸರ್ಕಾರಿ ಶಾಲೆಗೆ ಹೆಚ್ಚು ಮಕ್ಕಳು ಬರುತ್ತಿರುವ ಹೆಮ್ಮೆ ಈ ಶಾಲೆಗಿದೆ. ಆದರೂ, ಮೂಲಸೌಕರ್ಯ ಒದಗಿಸುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ. ಶಾಲೆಯನ್ನು ಮೇಲ್ದರ್ಜೆಗೇರಿಸಲು ಯಾವುದೇ ಜನಪ್ರತಿನಿಧಿಗಳಾಗಿರಲಿ, ಸಾರ್ವಜನಿಕ ಇಲಾಖೆ ಅಧಿಕಾರಿಗಳಾಗಿರಲಿ ಕಾಳಜಿ ವಹಿಸುತ್ತಿಲ್ಲ. ಪರಿಣಾಮ, ಶಾಲೆಯ ಕಟ್ಟಡಗಳು ಭಾಗಶಃ ಶೀತಲಾವಸ್ಥೆ ತಲುಪಿವೆ.
ಶತಮಾನ ಕಂಡಂತಹ ಕಟ್ಟಡವು ಮಳೆ ಬಂದರೆ ಸೋರುತ್ತದೆ. ಮಳೆ ಸುರಿಯುವ ಸಮಯದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಕೊಠಡಿಯಿಂದ ಹೊರ ನಿಲ್ಲಬೇಕಾದ ಪರಿಸ್ಥಿತಿ ಇದೆ. ಮುದ್ದೇಬಿಹಾಳದಲ್ಲಿ ಚರಂಡಿ ವ್ಯವಸ್ಥೆಯೂ ಸರಿ ಇಲ್ಲದ ಕಾರಣ, ಚರಂಡಿ ನೀರು ಶಾಲಾ ಆವರಣಕ್ಕೆ ನುಗ್ಗುತ್ತದೆ. ಶಿಕ್ಷಕರು-ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
“ಶಾಲೆಯ ಸಮಸ್ಯೆಗಳ ಬಗ್ಗೆ ಹಲವು ಬಾರಿ ಶಿಕ್ಷಣಾಧಿಕಾರಿ ಮತ್ತು ತಹಶೀಲ್ದಾರ್ ಗಮನಕ್ಕೆ ತಂದಿದ್ದೇವೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಶಾಲೆಯ ಮುಖ್ಯ ಶಿಕ್ಷಕ ಎನ್.ಎಚ್ ವಡ್ಡರ ಬೇಸರ ವ್ಯಕ್ತಪಡಿಸಿದ್ದಾರೆ.
“114 ವರ್ಷ ಪೂರೈಸಿರುವ ಶಾಲೆಯು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಶಾಲೆಯಲ್ಲಿ ಶೌಚಾಲಯವೇ ಇಲ್ಲ. ಶಾಲೆಯ ಎಲ್ಲಾ ಮಕ್ಕಳು ಸಾರ್ವಜನಿಕರ ಶೌಚಾಲಯ ಬಳಸುವ ಪರಿಸ್ಥಿತಿ ಇದೆ. ಶಿಕ್ಷಕರಿಗೆ ಕೊಡಾ ಇದೆ ಪರಿಸ್ಥಿತಿ ಇದೆ. ಮಾತ್ರವಲ್ಲದೆ, ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಶಾಲೆಗೆ ಮೀಸಲಾದ ಆಟದ ಮೈದಾನವೂ ಇಲ್ಲ. ಶಾಲೆಯ ಪಕ್ಕದಲ್ಲಿದ್ದ ಜಾಗವನ್ನು ಮಾರುಕಟ್ಟೆ ಕೊಟ್ಟು, ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ” ಎಂದು ಸ್ಥಳೀಯರು ಆರೋಪಿಸಿದ್ದಾರೆ.
“ನಗರದ ಹೃದಯ ಭಾಗದಲ್ಲಿರುವ ಶಾಲೆಯ ಪಕ್ಕದಲ್ಲಿಯೇ ಮಾರುಕಟ್ಟೆ ಇರುವುದರಿಂದ ಶಾಲೆಯ ಆವರಣದಲ್ಲಿಯೂ ಸಾರ್ವಜನಿಕರು ಹೆಗ್ಗಿಲ್ಲದೆ ಓಡಾಡುತ್ತಾರೆ. ಇದರಿಂದಾಗಿ, ವಿದ್ಯಾರ್ಥಿಗಳು ಪಾಠ ಕೇಳಲು ಕಿರಿಕಿರಿ ಉಂಟಾಗುತ್ತದೆ. ಶಾಲೆಯ ಸುತ್ತಲೂ ಕಾಂಪೌಂಡ್ ಇಲ್ಲದಿರುವುದು ಮತ್ತೊಂದು ರೀತಿಯ ಸಮಸ್ಯೆಯನ್ನು ಸೃಷ್ಟಿಸಿದೆ. ಶಾಲೆಗೆ ಕಾಂಪೌಂಡ್ ಕಟ್ಟಿಸಬೇಕು” ಎಂದು ಈದಿನ.ಕಾಮ್ ಜೊತೆ ಮಾತನಾಡಿದ ವಿದ್ಯಾರ್ಥಿಯೊಬ್ಬರ ಪಾಲರಾದ ಗೌರಿ ಹೇಳಿದ್ದಾರೆ.
“ಶಾಲೆಯು ನಗರದಲ್ಲಿ ಮಧ್ಯ ಭಾಗದಲ್ಲಿದ್ದು, ನಮಗೆ ತುಂಬಾ ಹತ್ತಿರವಾಗಿದೆ. ನಮ್ಮ ಮಕ್ಕಳು ಚನ್ನಾಗಿ ಓದಬೇಕು. ಆದರೆ, ಇಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಆದ್ದರಿಂದ ನಮ್ಮ ಮಕ್ಕಳನ್ನು ಅನಿವಾರ್ಯವಾಗಿ ಖಾಸಗಿ ಶಾಲೆಗಳಿಗೆ ಕಳಿಸಬೇಕಾದ ದುಸ್ಥಿತಿ ಎದುರಾಗಿದೆ” ಎಂದು ಗೌರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈದಿನ.ಕಾಮ್ ಜೊತೆ ಮಾತನಾಡಿದ ಶಾಲೆಯ ಎಸ್‌ಡಿಎಂಸಿ ಸದಸ್ಯ ಸಯ್ಯದ್ ಸುಲೇಮಾನ್, “ಶಾಲೆಯ ಅಭಿವೃದ್ಧಿಗಾಗಿ ಪುರಸಭೆಗೆ ಐದಾರು ಬಾರಿ ಅರ್ಜಿ ಕೊಟ್ಟಿದ್ದೇವೆ. ಆದರೆ, ಈವರೆಗೆ ಯಾವುದೆ ನೆರವು ದೊರೆತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಯ್ಯ ಹಿರೇಮಠ ಈದಿನ.ಕಾಮ್ ಜೊತೆ ಮಾತನಾಡಿ, “ಶಾಲೆಯ ಕಟ್ಟಡಗಳು 114 ವರ್ಷಗಳ ಹಳೆಯದ್ದಾಗಿವೆ. ಇದನ್ನು ಸರಿಪಡಿಸಲು ಸಾಕಷ್ಟು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ” ಎಂದು ದೂರಿದ್ದಾರೆ.
ಮುದ್ದೇಬಿಹಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸವಳಗಿ ಮಾತನಾಡಿ, “ಶಾಸಕರ ಅನುದಾನದಡಿಯಲ್ಲಿ 1 ಕೋಟಿ 65 ಲಕ್ಷ ಬಿಡುಗಡೆಯಾಗಿದೆ. ಆ ಹಣದಲ್ಲಿ ಶಾಲೆಗಳ ದುರಸ್ತಿ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.