ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಇಂದು (ಸೆ. 6ಕ್ಕೆ) ಬಾಗಿನ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಕೆಬಿಜೆಎನ್ಎಎಲ್ ಮುಖ್ಯ ಅಭಿಯಂತರ ಡಿ.ಬಸವರಾಜ ಕಾರ್ಯಕ್ರಮದ ಪೂರ್ವ ಸಿದ್ಧತೆಗಳ ಕುರಿತು ಸ್ಥಳ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಮುಖ್ಯಮಂತ್ರಿಗಳಿಂದ ಕೃಷ್ಣಯ ಜಲಧಿಗೆ ಬಾಗಿನ ಅರ್ಪಿಸುವ ಹಿನ್ನಲೆಯಲ್ಲಿ ಸ್ಥಳ ಪರಿಶೀಲಿಸಿಲಾಗಿದೆ. ಎಲ್ಲ ಇಲಾಖೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ತಯಾರಿ ಮಾಡಲಾಗುತ್ತಿದೆ ಎಂದರು. ಮುಖ್ಯ ಅಭಿಯಂತರ ಡಿ.ಬಸವರಾಜ ಮಾತನಾಡಿ, ಸಮಯದ ಅಭಾವ ಕಾರಣ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಗಂಗಾಪೂಜೆ ಹಾಗೂ ಬಾಗಿನ ಸಲ್ಲಿಕೆ, ಪತ್ರಿಕಾಗೋಷ್ಠಿ ನಡೆಯುವುದು.
ನಂತರ ಪ್ರವಾಸಿ ಮಂದಿರದ ಬಲಬದಿಯಲ್ಲಿ ರೈತರು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಅವಕಾಶ ಕಲ್ಪಿಸಲಾಗಿದೆ. ಪತ್ರಿ ಅಹವಾಲು ಸಲ್ಲಿಕೆಗೆ ನಾಲ್ವರಿಗೆ ಅವಕಾಶ ನೀಡಲಾಗುವುದು. ಅಹವಾಲು ಸಲ್ಲಿಸುವವರು ಮುಂಚಿತವಾಗಿ ನಿಗದಿತ ಅಧಿಕಾರಿಗಳ ಬಳಿ ನೋಂದಣಿ ಮಾಡಿಸಬೇಕು. ನಂತರ ಮುಖ್ಯಮಂತ್ರಿಗಳು ಹೆಲಿಕಾಪ್ಟರ್ ಮೂಲಕ ಆಲಮಟ್ಟಿಯಿಂದ ಕೊಪ್ಪಳಕ್ಕೆ ತೆರಳಲಿದ್ದಾರೆ ಎಂದು ಎಸ್.ಪಿ. ಲಕ್ಷ್ಮಣ ನಿಂಬರಗಿ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಜವಳಿ ಶಿವಾನಂದ ಪಾಟೀಲ, ಜಲಸಂಪನ್ಮೂಲ ಸಚಿವ ಡಿಸಿಎಂ ಡಿ.ಕೆ.ಶಿವಕುಮಾರ ಅಧ್ಯಕ್ಷತೆ ವಹಿಸಲಿದ್ದಾರೆ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸೇರಿದಂತೆ ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸಂಸದರು, ಶಾಸಕರು, ಎಂಎಲ್‌ಸಿ’ಗಳು, ಅಧಿಕಾರಿಗಳು ಉಪಸ್ಥಿತರಿರುವರು ಎಂದು ತಿಳಿಸಿದರು.