ಮುಂಗಾರು ಮಳೆ ಹಿನ್ನಲೆಯಲ್ಲಿ ಡೋಣಿ ನದಿ ತೀರದ ಪ್ರದೇಶದಲ್ಲಿನ ಕೃಷಿ ಭೂಮಿ ಪ್ರವಾಹಕ್ಕೊಳಗಾಗಿ ಅಂದಾಜು 5500 ಹೆಕ್ಟೇರ್ ಜಮೀನು ಮುಳುಗಡೆಯಾಗಿ ಬೆಳೆಗಳು ಹಾನಿಯಾಗಿವೆ. ಈ ಕುರಿತು ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಸಮೀಕ್ಷೆ ನಡೆಸಿ ಶೀಘ್ರದಲ್ಲೇ ಪೂರ್ಣಗೊಳಿಸಿ ವರದಿ ಸಲ್ಲಿಸಲಿವೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ. ತಿಳಿಸಿದರು.
ಡೋಣಿ ನದಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ. ಆನಂದ, ಜಿಪಂ ಸಿಇಒ ರಿಷಿ ಆನಂದ ಅವರೊಂದಿಗೆ ಜಂಟಿಯಾಗಿ ಜಿಲ್ಲೆಯ ಸಾರವಾಡ, ದದಾಮಟ್ಟಿ, ಉಕುಮನಾಳ ಹಾಗೂ ಎಂಬತ್ನಾಳ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿ ಮಾತನಾಡಿ, ವರದಿಯನುಸಾರ ಬೆಳೆ ನಷ್ಟವಾಗಿರುವ ರೈತರ ಖಾತೆಗೆ ನೇರವಾಗಿ ಪರಿಹಾರ ಹಣ ಜಮೆ ಮಾಡಲಾಗುವುದು ಎಂದರು.
ಡೋಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕಾಗಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಈಗಾಗಲೇ ಸ್ಥಳೀಯ ರೈತರು ಕೆಲವು ಬೇಡಿಕೆಗಳನ್ನು ಸಲ್ಲಿಸಿದ್ದು, ಇವರ ಬೇಡಿಕೆಯನ್ವಯ ಕಾಮಗಾರಿಗಳನ್ನು ಕೈಗೊಳ್ಳಲು ಬೇಕಾಗುವ ಅನುದಾನ, ಸೂಕ್ತ ಯೋಜನೆ ಕುರಿತಂತೆ ಜಿಲ್ಲಾ ಮಟ್ಟದಲ್ಲಿ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
“ಡೋಣಿ ನದಿಯ ಪ್ರವಾಹ ನಿಯಂತ್ರಣಕ್ಕಾಗಿ ಅಂದಾಜು 7.5 ಕೋಟಿ ರೂ.ಗಳ ವಿಪತ್ತು ನಿರ್ವಹನಾ ಉಪಶಮನ ನಿಧಿಯಡಿ ಈಗಾಗಲೇ ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗದಿಂದ ಸೇತುವೆ ಮುಂಭಾಗ ಹಾಗೂ ಹಿಂಭಾಗದಲ್ಲಿನ ಒಂದು ಕಿ.ಮೀ. ಅಂತರದಲ್ಲಿ ಹೂಳೂ ತೆಗೆಯುವುದು, ಗಿಡಗಂಟಿಗಳನ್ನು ತೆರವುಗೊಳಿಸುವುದು ಹಾಗೂ ಪಕ್ಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗದಂತೆ ಅರಣೀಕರಣ ಕಾಮಗಾರಿ ಸೇರಿದಂತೆ ಪ್ರವಾಹ ನಿಯಂತ್ರಣಕ್ಕಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ನವೆಂಬರ್ ಅಂತ್ಯದಲ್ಲಿ ಹೂಳು ತೆಗೆಯುವುದು, ಸೇತುವೆ ಪಾತ್ರದಲ್ಲಿ ಅರಣೀಕರಣ ಕಾಮಗಾರಿ ಸಹ ಆರಂಭವಾಗಲಿದ್ದು, ಡೋಣಿನದಿ ಪ್ರವಾಹ ನಿಯಂತ್ರಣ ಕಾಮಗಾರಿಗಳನ್ನು ಆದ್ಯತೆಯಾಗಿ ತೆಗೆದುಕೊಂಡು ಡೋಣಿ ನದಿಯಿಂದಾಗುವ ಸಮಸ್ಯೆಗಳನ್ನು ಅವಲೋಕಿಸಿ ಅದಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದರು.
ಇದನ್ನೂ ಓದಿ: ವಿಜಯಪುರ | ಅಕ್ಕಮಹಾದೇವಿ ಮಹಿಳಾ ವಿವಿಯ ವಿವಿಧ ಪಿಜಿ ಕೋರ್ಸ್‌ಗಳಿಗೆ ಸೆ.2ರಂದು ಕೌನ್ಸೆಲಿಂಗ್
ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಹುಲ್ ಭಾವಿದೊಡ್ಡಿ, ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಪ್ರಶಾಂತ ಪೂಜಾರಿ, ತಹಶೀಲ್ದಾರ್ ಶಾಂತಲಾ ಚಂದನ, ರೈತ ಭೀಮಸೇನ, ಮಲ್ಲಿಕಾರ್ಜುನ ಬಟಗಿ ಸೇರಿದಂತೆ ಅನೇಕರು ಭೇಟಿ ವೇಳೆ ಉಪಸ್ಥಿತರಿದ್ದರು.