ವಿಜಯಪುರ ನಗರದಲ್ಲಿರುವ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿಗಳಿಂದ ರಾಜ್ಯಪಾಲರಿಗೆ ಆರ್ಥಿಕವಾಗಿ ಹಿಂದುಳಿದ ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಘೋಷಣೆ ಮಾಡಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಮನವಿ ಮಾಡಿತು.
ದವಿಪ ಮುಖಂಡ ಅಕ್ಷಯ ಕುಮಾರ ಅಜಮನಿ ಮಾತನಾಡಿ, “ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನದ ಅರಿವು ಬಹುದೊಡ್ಡದಾಗಿದೆ. ತಂತ್ರಜ್ಞಾನವಿಲ್ಲದ ಕ್ಷೇತ್ರ ಜಗತ್ತಿನಲ್ಲಿಯೇ ಯಾವುದೂ ಇಲ್ಲದಂತಾಗಿದೆ. ಹತ್ತು ಜನ ಕೆಲಸ ನಿರ್ವಹಿಸುವ ಕೆಲಸವನ್ನು ತಂತ್ರಜ್ಞಾನದ ಮೂಲಕ ಒಬ್ಬರೇ ಮಾಡುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ಪದವಿ ಮತ್ತು ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ತಂತ್ರಜ್ಞಾನದ ಕಲಿಕೆ ಬಹಳ ಅವಶ್ಯಕವಾಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಸೇರಿ ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವುದರಿಂದ ಹೆಚ್ಚಿನ ಕಲಿಕೆಗೆ ಅನುಕೂಲ ವಾಗುತ್ತದೆ. ಸರ್ಕಾರಿ ನೌಕರಿ ಕ್ಷೀಣಿಸುತ್ತಿರುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸ್ವತಂತ್ರ ಜೀವನ ಕಟ್ಟಿಕೊಳ್ಳಲು ಲ್ಯಾಪ್ ಟಾಪ್ ತುಂಬಾ ಅವಶ್ಯಕವಾಗಿದೆ” ಎಂದರು.
“ತಮ್ಮ ತಮ್ಮ ವಯಕ್ತಿಕ ಜೀವನವನ್ನು ರೂಪಿಸಿಕೊಳ್ಳಲು, ತಮ್ಮದೇ ಉದ್ಯೋಗ ಪ್ರಾರಂಭಿಸಲು ಅನುಕೂಲವಾಗುವ ಯೋಜನೆ ಇದಾಗಿದೆ. ತಾವು ಹಿಂದೆ ನೀಡಿದ ಇದೇ ಯೋಜನೆಯಿಂದ ಎಷ್ಟೋ ಯುವಕರು ತಮ್ಮ ಬದುಕನ್ನ ಸಾಗಿಸುತ್ತಿದ್ದಾರೆ. ಆದ್ದರಿಂದ ಮತ್ತೆ ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವುದರಿಂದ ಮುಂದಿನ ಯುವಪೀಳಿಗೆಗೆ ಉತ್ತೇಜನವಾಗುತ್ತದೆ. ಈ ಯೋಜನೆಯನ್ನ ಸದುಪಯೋಗ ಪಡೆದುಕೊಂಡ ಯುವ ಪೀಳಿಗೆ ನಿಮ್ಮನ್ನ ಸ್ಮರಿಸುತ್ತಾರೆ” ಎಂದು ಮನವಿ ಮಾಡಿದರು.
ಇದನ್ನೂ ಓದಿ: ವಿಜಯಪುರ | ಬಸವ ವೃತ್ತದಲ್ಲಿ ದವಿಪ ವತಿಯಿಂದ ʼಬಸವ ಜಯಂತಿʼ ಆಚರಣೆ
ಈ ವೇಳೆ ದಾವುದ ನಯ್ಕೊಡಿ, ಪ್ರಶಾಂತ್ ದಾಂಡೇಕರ್, ಮಾದೇಶ ಚಾಲವಾದಿ, ಶಂಕರ ಬಸರಗಿ, ಯುವರಾಜ ಓಲೇಕಾರ, ಪಂಡಿತ್ ಯಲಗೋಡ, ಮಾಂತೇಶ ಚಲವಾದಿ, ತಲಾ ರಾಠೋಡ, ವಿವಿಯ ವಿದ್ಯಾರ್ಥಿನಿಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.