ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಷನ್ ಹೆಸರಿನಲ್ಲಿ ಶಿಕ್ಷಣವನ್ನು ಹಣ ವಸೂಲಿ ಮಾಡುವ ದಂಧೆಯಾಗಿ ಮಾರ್ಪಾಡು ಮಾಡಿಕೊಂಡಿದ್ದು, ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ದಲಿತ ವಿದ್ಯಾರ್ಥಿ ಪರಿಷತ್ ಗೆದ್ದು ಬೀಗಿದೆ.
“ಶಿಕ್ಷಣ ವ್ಯಾಪಾರೀಕರಣದ ವಿರುದ್ಧ ದವಿಪ ಸತತ ಹೋರಾಟ ಮಾಡುತ್ತ ಬರುತ್ತಿದ್ದು, ಪರಿಣಾಮವಾಗಿ ಜಿಲ್ಲೆಯ ಎರಡು ಭ್ರಷ್ಟ ಬಿ.ಎಡ್ ಕಾಲೇಜುಗಳನ್ನು 3 ವರ್ಷಗಳ ಕಾಲ ಬ್ಯಾನ್ ಮಾಡಿಸುವಲ್ಲಿ ಯಶಸ್ವಿಯಾಗಿದೆ” ಎಂದು ಪರಿಷತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ ಹೇಳಿದರು.
ವಿಜಯಪುರ ನಗರದ ಖಾಸಗಿ ಹೋಟೆಲ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ದುಡ್ಡು ಇದ್ದವರೆಗೆ ಮಾತ್ರ ಶಿಕ್ಷಣ ಎಂಬಂತೆ ಭ್ರಷ್ಟ ವ್ಯವಸ್ಥೆಯ ನಿರ್ಮಾಣ ಮಾಡಿಕೊಂಡಿದ್ದಾರೆ. ಸೇವಾರ್ಥದಲ್ಲಿ ನೀಡಬೇಕಾದ ಶಿಕ್ಷಣವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಇಂದು ದುಡ್ಡು ಮಾಡುವ ಕೇಂದ್ರಗಳನ್ನಾಗಿ ಮಾಡಿಕೊಂಡಿವೆ. ಇದರಿಂದಾಗಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೈಗೆಟುಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ತಡೆಯಲು ಸರ್ಕಾರವು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಅವು ಯಾವು ಕೂಡ ಜಾರಿಗೆ ಬರುತ್ತಿಲ್ಲ. ಡೊನೇಷನ್ ತಡೆಯಲು ಸರ್ಕಾರವು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ನಿಯಂತ್ರಣ ಪ್ರಾಧಿಕಾರಗಳನ್ನು ರಚಿಸಿದೆ. ಅಲ್ಲದೆ, ಡೊನೇಷನ್ ಪಡೆದು ಶಾಲೆ ನಡೆಸುತ್ತಿರುವ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸುವ ಅಧಿಕಾರವನ್ನು ಈ ಪ್ರಾಧಿಕಾರಗಳಿಗೆ ನೀಡಲಾಗಿದೆ. ಆದರೆ ಈ ಪ್ರಾಧಿಕಾರ ಹೆಸರಿಗೆ ಮಾತ್ರ ಎಂಬಂತಾಗಿದೆ. ಡೊನೇಷನ್ ತಡೆಗೂ ತಮಗೂ ಸಂಬಂಧವೇ ಇಲ್ಲ ಎಂಬ ಮನೋಭಾವ ಶಿಕ್ಷಣ ಇಲಾಖೆ ಹೊಂದಿದ್ದು, ಈ ಕುರಿತು ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಜಿಲ್ಲೆಯ ಶಾಲಾ–ಕಾಲೇಜುಗಳು ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಶುಲ್ಕವನ್ನು ಪಡೆದುಕೊಳ್ಳುತ್ತಿದ್ದು, ಜಿಲ್ಲೆಯ ಯಾವುದೇ ಶಿಕ್ಷಣ ಸಂಸ್ಥೆಗಳು ನಿಯಮ ಪಾಲಿಸುತ್ತಿಲ್ಲ. ಇದರಿಂದ ಬಡ ಪೋಷಕರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ. ದಲಿತ ವಿದ್ಯಾರ್ಥಿ ಪರಿಷತ್ ಈ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತ ಬರುತ್ತಿದೆ. ಈ ಹೋರಾಟ ಮುಂದುವರೆಯಲಿದೆ” ಎಂದರು.
ದಲಿತ ವಿದ್ಯಾರ್ಥಿ ಪರಿಷತ್ ಹೋರಾಟದ ಫಲವಾಗಿ ಜಿಲ್ಲೆಯ ಎರಡು Bed ಕಾಲೇಜುಗಳನ್ನು 3 ವರ್ಷ ಬ್ಯಾನ್ ಹಾಗೂ ಎರಡು ಕಾಲೇಜುಗಳಿಗೆ ತಲಾ 30 ಲಕ್ಷ ದಂಡ ಹಾಕಿಸುವಲ್ಲಿ ಯಶಸ್ವಿಯಾಗಿದ್ದೇವೆ. ವಿಜಯಪುರ ನಗರದ ಎಸ್.ಎಮ್.ಆರ್.ಕೆ ಬಿ.ಎಡ್ ಕಾಲೇಜು ಹಾಗೂ ಕುಮಾರಿ ಮೋನಿಕಾ ಕನ್ನಿ ಬಿ.ಎಡ್ ಕಾಲೇಜು, ಪ್ರವೇಶಾತಿ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಹೆಚ್ಚುವರಿ ಡೊನೇಷನ್ ಪಡೆಯುತ್ತಿದ್ದವು. ಪರಿಣಿತಿಯಿಲ್ಲದ ಉಪನ್ಯಾಸಕರು, ಭೋದಕರು ಹಾಗೂ ಶಿಕ್ಷಕರಿಂದ ಭೋದಿಸುತ್ತಿದ್ದವು. ಈ ಸಮಸ್ಯೆಗಳ ಕುರಿತು ಅಲ್ಲಿನ ವಿದ್ಯಾರ್ಥಿಗಳೇ ಖುದ್ದಾಗಿ ದವಿಪ ಸಂಪರ್ಕಿಸಿ, ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ಕೇಳಿದ ಕಾರಣ ದಿನಾಂಕ 12/11/2024 ರಂದು ವಿದ್ಯಾರ್ಥಿಗಳಿಗೊಂದಿಗೆ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿತ್ತು.
ಬಳಿಕ ಎಸ್‌ಎಮ್‌ಆರ್‌ಕೆ ಬಿ.ಎಡ್ ಕಾಲೇಜು ವಿಜಯಪುರ ಹಾಗೂ ಕುಮಾರಿ ಮೋನಿಕಾ ಬಸವರಾಜ ಕನ್ನಿ ಬಿ.ಎಡ್ ಕಾಲೇಜು ಅಥಣಿ ರಸ್ತೆ, ವಿಜಯಪುರ ಈ ಮಹಾವಿದ್ಯಾಲಯಗಳನ್ನು 2025-26 ಶೈಕ್ಷಣಿಕ ಸಾಲಿನಿಂದ ಪ್ರವೇಶಾತಿಗೆ ಅವಕಾಶ ನೀಡದೇ 3 ವರ್ಷ ಅವಧಿಗೆ ಅಮಾನತ್ತಿನಲ್ಲಿಡಲು ಹಾಗೂ ಎರಡು ಕಾಲೇಜುಗಳಿಗೆ ತಲಾ 30 ಲಕ್ಷ ದಂಡ ವಿಧಿಸಲು ಸಭೆಯು ತೀರ್ಮಾನಿಸಿದೆ. ಮುಂದುವರೆದು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಸಮೀಪದ ಮಹಾವಿದ್ಯಾಲಯಗಳಲ್ಲಿ ವರ್ಗಾಯಿಸಲು ಸದರಿ ಸಭೆಯು ತೀರ್ಮಾನಿಸಿದೆ ಎಂದು ದವಿಪ ತಿಳಿಸಿದೆ.
ಇದನ್ನೂ ಓದಿ: ವಿಜಯಪುರ | ಮಹಿಳಾ ವಿವಿ ಆವರಣದಲ್ಲಿರುವ ಅಕ್ಕಮಹಾದೇವಿ ಮೂರ್ತಿ ತೆರವಿಗೆ ಆಗ್ರಹ
“ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಈ ನಡೆಯು ದಲಿತ ವಿದ್ಯಾರ್ಥಿ ಪರಿಷತ್ ಸ್ವಾಗತಿಸುತ್ತದೆ. ಕೊಡಲೇ ಎರಡು ಕಾಲೇಜುಗಳಲ್ಲಿ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಒಳ್ಳೆಯ ಶೈಕ್ಷಣಿಕ ವಾತಾವರಣ ಇರುವ ಮಹಾವಿದ್ಯಾಲಯಗಳಲ್ಲಿ ವರ್ಗಾಯಿಸಬೇಕು ಜೊತೆಗೆ ಸದರಿ ಎರಡು ಕಾಲೇಜುಗಳು ಗುಣಮಟ್ಟ ಶಿಕ್ಷಣ ನೀಡದೇ ಮತ್ತು ಸರ್ಕಾರ ನಿಯಮಗಳ ಪಾಲನೆ ಮಾಡದೇ ಇರುವುದು ಕಂಡು ಬಂದಿದೆ. ಕೊಡಲೇ ಸರ್ಕಾರ ಇವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ಮೂಲಕ ಡೋನೆಷನ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಠಿಣ ಸಂದೇಶ ರವಾನೆ ಮಾಡಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ಹಲವಾರು ಭಾಗಗಳಲ್ಲಿ ಅನಧಿಕೃತ, ಕಾನೂನು ಬಾಹಿರ ಸರ್ಕಾರ ನಿಯಮಗಳನ್ನು ಪಾಲಿಸದೆ ಇರುವ ಶಾಲಾ, ಕಾಲೇಜು ಹಾಗೂ ಸಂಸ್ಥೆಗಳ ವಿರುದ್ಧ ನಮ್ಮ ಹೋರಾಟ ತೀವ್ರವಾಗಿರಲಿದೆ” ಎಂದು ಶ್ರೀನಾಥ ಪೂಜಾರಿ ಹೇಳಿದರು.
ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ವಿಜಯಪುರ ಜಿಲ್ಲಾ ಸಂಚಾಲಕ ಅಕ್ಷಯ ಕುಮಾರ ಅಜಮನಿ, ಜಿಲ್ಲಾ ಸಹ ಸಂಚಾಲಕ ಮಹಾದೇವ ಚಲವಾದಿ, ಮುಖಂಡರಾದ ಸಂದೇಶ ಹಾಗೂ ಯಾಸೀನ ಇನಾಮದಾರ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.