ಪ್ರಸ್ತುತ ದಿನಗಳಲ್ಲಿ ಹವಾಮಾನದಲ್ಲಿ ಬಹಳಷ್ಟು ಏರುಪೇರು ಆಗುತ್ತಿರುವುದನ್ನು ಕಾಣುತ್ತೇವೆ. ತಕ್ಕ ಮಟ್ಟಿಗೆ ಇದನ್ನು ಸರಿದೂಗಿಸಲು ನಾವೆಲ್ಲರೂ ನಮ್ಮ ಹಾಗೂ ನಮ್ಮ ಕುಟುಂಬದ ಸದಸ್ಯರ ಹುಟ್ಟುಹಬ್ಬಕ್ಕೆ ಪ್ರತಿ ವರ್ಷ ಗಿಡಗಳನ್ನು ನೆಟ್ಟು ರಕ್ಷಣೆ ಮಾಡಿ ಪರಿಸರ ಕಾಪಾಡುವಲ್ಲಿ ಪ್ರಯತ್ನ ಮಾಡಬೇಕು ಎಂದು ಗಣಿಹಾರ ಪ್ರೌಢಶಾಲೆ ಮುಖ್ಯಶಿಕ್ಷಕ ಸಿದ್ದಲಿಂಗ ಚೌದ್ರಿ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ಸಂಗಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮುಂದಿನ ದಿನಮಾನಗಳಲ್ಲಿ ನಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳು ಆಮ್ಲಜನಕ ಇಲ್ಲದೆ ನರಳಾಡುವ ಸಂದರ್ಭ ಬರುವುದು. ನಮ್ಮ ಪೂರ್ವಜರು ಸರಿಯಾಗಿ ಊಟ ಇಲ್ಲದಿದ್ದರೂ 100 ವರ್ಷ ಬದುಕುತ್ತಿದ್ದರು. ಆದರೆ ಆಧುನಿಕ ಯುಗದಲ್ಲಿ 50 ವರ್ಷ ಬದುಕುವುದೂ ಕೂಡ ಬಹಳ ಕಷ್ಟವಾಗಿದೆ. ಕಾರಣ ನಾವು ತಿನ್ನುವ ಆಹಾರ ರಸಾಯನಿಕ ಗೊಬ್ಬರದಿಂದ ಬೆಳೆದಿದೆ. ಜಲಮಾಲಿನ್ಯ, ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ದಿನದಿಂದ ದಿನಕ್ಕೆ ಏರು ಗತಿಯಲ್ಲಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ ಮಾತನಾಡಿ, “ನಾವು ಹುಟ್ಟಿ ಬೆಳೆದಾಗಿನಿಂದ ಮೂರು ಕಾಲಗಳನ್ನು ಕಂಡಿದ್ದೇವೆ. ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಗಾಲ. ಇತ್ತೀಚಿನ ದಿನಗಳಲ್ಲಿ ಕಾಲಗಳಿಗೆ ಇದೇ ತಿಂಗಳೆಂಬುದು ಇಲ್ಲ. ಕಾರಣ ಹವಾಮಾನ ಗಣನೀಯವಾಗಿ ಬದಲಾವಣೆಯಾಗಿದೆ. ರೋಗಗಳೂ ಕೂಡ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಏರುತ್ತಲೇ ಇವೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರುತ್ತಿದೆ. ಪ್ಲಾಸ್ಟಿಕ್ ಅವಂಲಬಿತ ನಮ್ಮ ಜೀವನವಾಗಿದೆ. ಈ ಎಲ್ಲ ಬದಲಾವಣೆಗಳು ನಮ್ಮ ದೈನಂದಿನ ಜೀವನದಲ್ಲಿ ಮತ್ತು ಪ್ರಕೃತಿಯ ಏರುಪೇರಿಗೆ ಕಾರಣವಾಗಿದೆ” ಎಂದರು.
ಸಿಂತಿಯಾ ಡಿಮೆಲ್ಲೊ ಸಹ ನಿರ್ದೇಶಕರು ಮಾತನಾಡಿ, “ಹವಾಮಾನದಲ್ಲಿ ಆಗುವಂತಹ ಬದಲಾವಣೆಗಳನ್ನು ವಿಡಿಯೋ ಹಾಗೂ ಭಿತ್ತಿಚಿತ್ರಗಳ ಮೂಲಕ ಹಾಗೂ ಪರ್ಯಾಯ ವಿಧಾನಗಳಾದ ಪ್ಲಾಸ್ಟಿಕ್ ಬದಲು ಬಟ್ಟೆ ಚೀಲ, ಅಡುಗೆ ಕೋಣೆಯಲ್ಲಿ ಕಾಳುಕಡ್ಡಿ ಸಂಗ್ರಹಿಸಲು ಗಾಜಿನ ಡಬ್ಬಿಗಳು ಹೊಸದಾಗಿ ವಾಹನ ಖರೀದಿ ಮಾಡಿದಾಗ, ಹುಟ್ಟು ಹಬ್ಬಕ್ಕೆ, ಮಗು ಜನಿಸಿದಾಗ, ಮದುವೆಯಾದಾಗ ಹೀಗೆ ವಿವಿಧ ಸಂದರ್ಭಗಳಲ್ಲಿ ಗಿಡಗಳನ್ನು ನೆಡುವುದು, ಕಾಲ್ನಡಿಗೆ, ಸೈಕಲ್ ಬಳಸುವುದು, ಸಾರ್ವಜನಿಕ ವಾಹನಗಳ ಬಳಕೆ, ಭೂಮಿಯಲ್ಲಿ ನೀರಿನ ಮಟ್ಟ ಹೆಚ್ಚಿಸಲು ಮಳೆ ನೀರು ಕೊಯ್ದು ಬೋರ್ವೆಲ್ ರಿಚಾರ್ಜ್, ತೆರೆದಬಾವಿ ಮರುಪೂರಣ, ಗೋಬರ್ ಗ್ಯಾಸ್ ಮತ್ತು ಹೊಗೆರಹಿತ ಒಲೆ ಬಳಸುವುದರಿಂದ ಸ್ವಲ್ಪಮಟ್ಟಿಗೆ ನಾವು ಹವಾಮಾನ ವೈಪೆರೀತ್ಯವನ್ನು ತಡೆಯಲು ಸಾಧ್ಯ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ವೈದ್ಯಕೀಯ ಕಾಲೇಜು ಸ್ಥಾಪನೆ: ಖಾಸಗಿ ಸಹಭಾಗಿತ್ವಕ್ಕೆ ಎಐಡಿಎಸ್‌ಒ ಖಂಡನೆ
ಈ ವೇಳೆ ಜನ ವೇದಿಕೆ ನಾಯಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಹಾಗೂ ಹಳ್ಳಿ ಅಭಿವೃದ್ಧಿ ಸಮಿತಿಯ ಸದಸ್ಯರು ತರಬೇತಿಯಲ್ಲಿ ಭಾಗವಹಿಸಿದರು. ಮಲಕಪ್ಪ ಹಲಗಿ ನಿರೂಪಿಸಿದರು, ಉಮೇಶ ದೊಡಮನಿ ಸ್ವಾಗತಿಸಿದರು, ವಿಜಯ್ ಬಂಟನೂರು ವಂದಿಸಿದರು.