ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಏತನೀರಾವರಿ ಯೋಜನೆಯಡಿ ವಡವಡಗಿ ಕೆರೆ ನೀರು ತುಂಬುವ ಕಾಮಗಾರಿಗೆ ಸಂಬಂಧಿಸಿದಂತೆ ರೈತ ಮಂಜುನಾಥ ತಳವಾರ ಅವರ ಸ.ನಂ.163/3 ರ ಭೂಮಿ ಪಡೆದ ಅಧಿಕಾರಿಗಳು, ಇಲ್ಲಿವರೆಗೆ ಪರಿಹಾರವನ್ನೂ ನೀಡದೇ ನಿರ್ಲಕ್ಷ್ಯ ತೋರಿರುತ್ತಾರೆ. ಅಂತಹವರ ವಿರುದ್ಧ ಕ್ರಮ ಕೈಗೊಂಡು ವಜಾ ಮಾಡಬೇಕು ಹಾಗೂ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರು ಆಗ್ರಹಿಸಿದರು.
ಈ ಕುರಿತು ಕೆಬಿಜೆಎನ್ಎಲ್‌ನ ಮುಖ್ಯ ಅಭಿಯಂತರ ಡಾ. ಬಸವರಾಜ ಹಾಗೂ ಐ ಎಲ್ ಕಳಸದ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮನವಿ ಸಲ್ಲಿಸಿ ಮಾತನಾಡಿ, “ತಮ್ಮ ಇಲಾಖೆಯ ವತಿಯಿಂದ ಮಾಡಿರುವ ಮುಳವಾಡ ಏತನೀರಾವರಿ ಯೋಜನೆಯಡಿ ವಡವಡಗಿ ಕೆರೆ ನೀರು ತುಂಬುವ ಕಾಮಗಾರಿಗೆ ಸಂಬಂಧಿಸಿದಂತೆ ಕಾಮಗಾರಿಯನ್ನೂ ಸಂಪೂರ್ಣ ಮಾಡದೇ ಗುತ್ತಿಗೆದಾರರು ಬಿಲ್ ಸಂದಾಯ ಮಾಡಿಕೊಂಡಿರುತ್ತಾರೆ. ಇದಕ್ಕೆ ಇಲಾಖೆಯ ಅಧಿಕಾರಿಗಳು ಶಾಮಿಲಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ನಷ್ಟಗೊಂಡ ರೈತರಿಗೆ ಇಲ್ಲಿಯವರೆಗೆ ಯಾವುದೇ ಭೂ ಪರಿಹಾರ ನೀಡಿರುವುದಿಲ್ಲ, 1972 ರಿಂದ ಜಮೀನಿನಲ್ಲಿ ವಿದ್ಯುತ್ ಸಂಪರ್ಕವಿತ್ತು. 638 ದಾಳಿಂಬೆ ಗಿಡ, ಒಂದು ಬಾವಿ, ಒಂದು ಬೊರವೆಲ್ ಒಳಗೊಂಡ ತೋಟದಲ್ಲಿ ಸುಮಾರು 50 ವರ್ಷಗಳಿಂದ ಕೃಷಿ ಮಾಡಲಾಗುತ್ತಿತ್ತು. ಇದನ್ನು ಗಣನೆಗೆ ತೆಗೆದುಕೊಳ್ಳದೇ ಪ್ರಭಾವಿಗಳ ಕೈವಾಡದಿಂದ ರೈತರಿಗೆ ನಷ್ಟ ಉಂಟಾಗುವಂತೆ ಅಧಿಕಾರಿಗಳು ಮಾಡಿದ್ದಾರೆ. ಕೂಡಲೇ ಇದರಲ್ಲಿ ಭಾಗಿಯಾಗಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ವಿಜಯಪುರ | ಮಹಿಳಾ ಸಬಲೀಕರಣದತ್ತ ʼಒಡಲ ಧ್ವನಿ ಒಕ್ಕೂಟʼದ ಹೆಜ್ಜೆ; ರೈತರಿಗೆ ಕೃಷಿ ಪರಿಕರ ವಿತರಣೆ
“ಎಲ್ಲವೂ ಸರಿ ಇದೆ ಎಂದು ಬಿಂಬಿಸಿ ಕಾಮಗಾರಿಯ ಬಿಲ್ ಮಾಡಿರುವ ಇಲಾಖೆ ಅಧಿಕಾರಿಗಳನ್ನ ವಜಾ ಗೊಳಿಸಬೇಕು ಇಲ್ಲವಾದಲ್ಲಿ ಒಂದು ವಾರದ ನಂತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಲಮಟ್ಟಿಯ ಕೆ.ಬಿ.ಜೆ.ಎನ್.ಎಲ್ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಹಾಕಿ ಉಗ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದರು.
ಈ ವೇಳೆ ಜಿಲ್ಲಾ ಪ್ರಧಾನಕಾರ್ಯದರ್ಶಿ ರಾಮನಗೌಡ ಪಾಟೀಲ, ನಿಡಗುಂದಿ ತಾಲೂಕು ಅಧ್ಯಕ್ಷ ಡಾ. ಕೆ ಎಂ ಗುಡ್ನಾಳ, ಮುಖಂಡರಾದ ತಿಪ್ಪಣ್ಣ ನಾಟಿಕಾರ, ಮೋತಿಲಾಲ ಉಣ್ಣಿಬಾಯಿ, ದಾನಪ್ಪ ಗದ್ಯಾಳ, ಮಂಜುನಾಥ ನಾಟಿಕಾರ, ಬುಡ್ಡೆಸಾಬ ಡವಳಗಿ, ಮೋದಿನಸಾಬ ಭಾಗವಾನ, ಕಲ್ಲಪ್ಪ ಅಫಜಲಪುರ ಸೇರಿದಂತೆ ಇತರರು ಇದ್ದರು.