ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಉದ್ಯೋಗಗಳ ಶೀಘ್ರ ಭರ್ತಿಗೆ ಕ್ರಮ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಉದ್ಯೋಗ ಆಕಾಂಕ್ಷಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಹಲವು ಯುವಕರು ಪ್ರತಿಭಟನೆ ನಡೆಸಿ ವಿಜಯಪುರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಪ್ರಧಾನಿ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧೀವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ, ಮಾತನಾಡಿದ ಸಮಿತಿಯ ಮುಖಂಡ ಸಿದ್ದಲಿಂಗ ಬಾಗೇವಾಡಿ, “ರಾಜ್ಯ ಸರ್ಕಾರದ ಸುಮಾರು 28 ಇಲಾಖೆಗಳಲ್ಲಿ 2.86 ಲಕ್ಷ ಉದ್ಯೋಗಗಳು ಖಾಲಿ ಇದ್ದು, ಶೀಘ್ರ ಭರ್ತಿ ಮಾಡಿಕೊಳ್ಳಬೇಕು. ಉದ್ಯೋಗಗಳ ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕು. ಕಳೆದ ಹಲವಾರು ವರ್ಷಗಳಿಂದ ನೇಮಕಾತಿ ಇಲ್ಲದಿರುವುದರಿಂದ ಕನಿಷ್ಠ ಐದು ವರ್ಷಗಳ ವಯಸ್ಸು ಸಡಲಿಕೆ ಮಾಡಬೇಕು. ನಿರೋದ್ಯಗವು ಭೀಕರ ಸ್ವರೋಪ ಪಡೆದಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರಕಾರದ ನಾನಾ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ಮಾಡುತ್ತಿಲ್ಲ. ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಮಾಡುವವರು ವಿರುದ್ಧ ಯುವಕರು ಹೋರಾಟ ಮಾಡಬೇಕು” ಎಂದು ಸಲಹೆ ನೀಡಿದರು.
ಇದನ್ನೂ ಓದಿ: ವಿಜಯಪುರ | ಪ್ರವಾಹದಲ್ಲಿ ಕೊಚ್ಚಿಹೋದ ಬದುಕು, ಕಣ್ಣೀರೊರೆಸುವುದೇ ಸರ್ಕಾರ?
ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಮುಖಂಡ ಶ್ರೀನಾಥ ಪೂಜಾರಿ ಮಾತನಾಡಿ, “ಯುವಜನತೆ ತಮ್ಮ ಹಕ್ಕುಗಳಿಗೆ ಒಗ್ಗಟ್ಟಾಗಿ ಹೋರಾಟ ಮಾಡುವುದು ಈ ಗಳಿಗೆಯ ಅವಶ್ಯಕತೆಯಾಗಿದೆ. ಇಲ್ಲವಾದಲ್ಲಿ ನಮ್ಮನ್ನಾಳುವವರು ಯುವಕರನ್ನು ಮೂಲೆಗುಂಪು ಮಾಡುತ್ತಾರೆ” ಎಂದು ಯುವಕರನ್ನು ಎಚ್ಚರಿಕೆ ನೀಡಿದರು.
ಈ ವೇಳೆ ಸಿದ್ರಾಮ ಹಿರೇಮಠ, ಉದ್ಯೋಗಾಕಾಂಕ್ಷಿ ಅಶ್ವಿನಿ, ಯಲ್ಲಾಲಿಂಗ ಮಾತನಾಡಿದರು. ವಿಶ್ವ ಶಹಪುರ, ಗಿರೀಶ ಚೌವಣ, ರಾಜು ರಾಠೋಡ, ಜೈರೆಡ್ಡಿ, ಶಾರದಾ, ದೀಪಾ, ನಾಗಮ್ಮ, ಮಂಜುಳಾ, ಅನಿಲ್, ಹರೀಶ, ರಾಜು, ಅರ್ಜುನ್, ಮಲ್ಲು ಕಾಮನಕೇರಿ ಇದ್ದರು.