ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬನ್ನೆಟ್ಟಿ ಪಿ ಎ ಗ್ರಾಮದ ಮಹಾದೇವಪ್ಪ ಹರಿಜನ(ಪೂಜಾರಿ) ಅವರ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಏಳು ದಿನಗಳಿಂದ ನಡೆಯುತ್ತಿದ್ದ ಧರಣಿ ಶನಿವಾರ ಸಂಜೆ ಅಂತ್ಯಗೊಂಡಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸ್ಥಳಕ್ಕೆ ಭೇಟಿ ನೀಡಿ, “ಕೊಲೆ ಪ್ರಕರಣದ ತನಿಖೆ ಸಾಕಷ್ಟು ಪ್ರಗತಿಯಲ್ಲಿದೆ. ಆರೋಪಿಗಳು ಯಾರೇ ಆಗಿರಲಿ ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ತಾವು ಕಾಲಾವಕಾಶ ನೀಡಬೇಕು” ಎಂದು ಧರಣಿನಿರತ ದಲಿತ ಸಂಘಟನೆಗಳ ಒಕ್ಕೂಟದ ಪ್ರಮುಖರಿಗೆ ಮನವರಿಕೆ ಮಾಡಿಕೊಟ್ಟರು.
“ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಗಳ ಜತೆಗೆ ಸಾಕ್ಷ್ಯಾಧಾರಗಳು ತುಂಬಾ ಮುಖ್ಯ. ಕೋರ್ಟ್ ಅನುಮತಿ ಪಡೆದು ತನಿಖೆ ಮುಂದುವರೆದಿದೆ. ಅರೇಳು ತಿಂಗಳ ಕಾಲಾವಕಾಶ ಬೇಕಿದ್ದ ಈ ವೈಜ್ಞಾನಿಕ ತನಿಖೆಯನ್ನು ಕೇವಲ ಎರಡೇ ತಿಂಗಳಲ್ಲಿ ಮಾಡಲಾಗುತ್ತಿದೆ” ಎಂದು ತಿಳಿಸಿದರು.
“ಪ್ರತಿಭಟನೆ ಮಾಡದಿದ್ದರೂ ಪೊಲೀಸ್ ಇಲಾಖೆ ತನ್ನ ತನಿಖಾ ಕಾರ್ಯವನ್ನು ಗಂಭೀರವಾಗಿಯೇ ಮಾಡುತ್ತದೆ. ಹೋದ ವರ್ಷ ಕಲಕೇರಿ ಠಾಣಾ ವ್ಯಾಪ್ತಿಯ ಪ್ರಕರಣ ಕಾಲುವೆಯಲ್ಲಿ ಬರೀ ಎಲುಬು ಹೊಂದಿದ ಅನಾಥ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷದ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಹೀಗಾಗಿ ಕಾಲಾವಕಾಶ ಕೊಟ್ಟರೆ ಆರೋಪಿಯನ್ನು ಪತ್ತೆ ಹಚ್ಚಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ ನಗರಸಭೆಯ ಯುಜಿಡಿ ಸಮಸ್ಯೆಗೆ ಪರಿಹಾರ ಹುಡುಕುವತ್ತ ಹೆಜ್ಜೆ: ನಾಗರಾಜ್ ಜೆ
“ಈ ಪ್ರಕರಣ ಇನ್ನುಮುಂದೆ ನನ್ನ ಜವಾಬ್ದಾರಿ. ಎಲ್ಲ ಆಯಾಮಗಳಲ್ಲಿ ಎಫ್‌ಎಸ್ಎಲ್ ವರದಿಯನ್ವಯ ತನಿಖೆ ಮುಂದುವರೆದಿದೆ. ಸಹಕಾರ ಕೊಡಿ ಪ್ರತಿಭಟನೆ ಕೈಬಿಡಿ” ಎಂದು ಕೇಳಿಕೊಂಡರು.
ದಲಿತ ಸಂಘಟನೆಗಳ ಮುಖಂಡರಾದ ರಮೇಶ ಆಸಂಗಿ, ವಿನಾಯಕ ಗುಣಸಾಗರ, ಬಿ ಎಸ್ ತಳವಾರ, ಚಂದ್ರಕಾಂತ ಸಿಂಗೆ, ಪ್ರಕಾಶ ಗುಡಿಮನಿ, ಶರಣು ಸಿಂಧೆ, ರವಿ ಹೋಳಿ, ಶ್ರೀನಿವಾಸ ಓಲೇಕಾರ, ಅಶೋಕ ಚಲವಾದಿ, ಸುಭದ್ರಾ ಮೇಲಿನಮನಿ ಇದ್ದರು.