ವಿಜಯಪುರಕ್ಕೆ ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಿದರೆ ಅದಕ್ಕೆ ವಿರೋಧ ಇದೆಯೆಂದು ಹೇಳಿದ ಅವರು ಬಾಗಲಕೋಟೆಗೆ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಮಾಡಿದರೂ ನಡೆಯುತ್ತಿದೆಯೆಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಬಾಗಲಕೋಟೆ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಪ.ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೀಳಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಸರ್ಕಾರ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ತೆರೆಯುತ್ತೇವೆಂದು ಹೇಳಿದ ಪ್ರಕಾರ ಬಾಗಲಕೋಟೆಗೆ ಈಗಾಗಲೇ ಮಂಜೂರಾತಿ ದೊರೆತು ಪ್ರಾರಂಭದ ಪ್ರಕ್ರಿಯೆಗಳು ನಡೆದಿದ್ದು, ಈ ಸಂದರ್ಭದಲ್ಲಿ ಸಚಿವ ಶಿವಾನಂದ ಪಾಟೀಲರು ಬಾಗಲಕೋಟೆಗೆ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ತೆರೆಯುವ ಹೇಳಿಕೆ ನೀಡಿರುವುದು ಸಮಂಜಸವಲ್ಲ. ಕೂಡಲೇ ನಿಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಬೆಣ್ಣೆ ಹೊಳೆ ಜಲಪಾತದಲ್ಲಿ ದುರಂತ: ಒಬ್ಬ ವಿದ್ಯಾರ್ಥಿ ನೀರು ಪಾಲು; ಮತ್ತೊಬ್ಬನ ರಕ್ಷಣೆ
“ಒಂದು ವೇಳೆ ಸರ್ಕಾರ ಬಾಗಲಕೋಟೆಗೆ ಪಿಪಿಪಿ ಮಾದರಿಯ ಕಾಲೇಜು ಸಂಶೋಧನಾ ಆಸ್ಪತ್ರೆ ತೆರೆದರೆ ಬಡ ಹಾಗೂ ಮಧ್ಯಮ ವರ್ಗದ ಜನಾಂಗಕ್ಕೆ ಆರ್ಥಿಕ ಹೊರೆಯಾಗಲಿದ್ದು, ತಕ್ಷಣ ಕೃಷಿ ಮಾರುಕಟ್ಟೆ ಸಚಿವರ ಹೇಳಿಕೆಯಂತೆ ಸರ್ಕಾರ ಯಾವುದೇ ಆಲೋಚನೆ ಮಾಡಬಾರದು. ಹಾಗೆ ಮಾಡಿದ್ದೇ ಆದಲ್ಲಿ ಜಿಲ್ಲೆಯ ಜನರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ” ಎಂದರು.