ಧರಣಿ ಕುಳಿತವರು ಯಾರೂ ಅಜ್ಞಾನಿಗಳಲ್ಲ, ಎಲ್ಲರೂ ಉನ್ನತ ಶಿಕ್ಷಣ ಅಧ್ಯಯನ ಮಾಡಿದಂಥವರು. ಇಲ್ಲಿ ಯಾರದೂ ಸ್ವಾರ್ಥವಿಲ್ಲ. ಮತ್ತೊಬ್ಬರಿಂದ ಪ್ರಚೋದನೆಗೆ ಒಳಗಾಗಿ ಅಥವಾ ಯಾರದೋ ಕುಮ್ಮಕ್ಕಿನಿಂದ ಧರಣಿ ಕೂತಿಲ್ಲ ಎಂದು ವಿಜಯಪುರ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರ, ʼಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಬಾರದೆಂದು ನಡೆಸುತ್ತಿರುವ ಧರಣಿ ಯಾರದೋ ಕುಮ್ಮಕ್ಕಿನಿಂದ ನಡೆಸುತ್ತಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅರವಿಂದ ಕುಲಕರ್ಣಿಯವರು, “ಧರಣಿಯ ಬಗ್ಗೆ ಹಗುರವಾಗಿ ಮಾತನಾಡಬಾರದು. ಹೋರಾಟಗಾರರಲ್ಲಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಸಚಿವರ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.
“ಧರಣಿ ಕುಳಿತವರು ಯಾವ ಕಾರಣಕ್ಕಾಗಿ ಕುಳಿತಿದ್ದಾರೆ, ಅವರ ನಿಲುವೇನು? ಯಾರಿಗಾಗಿ ಧರಣಿ ಕುಳಿತಿದ್ದಾರೆ ಮತ್ತು ಏತಕ್ಕಾಗಿ ಧರಣಿ ನಡೆಸುತ್ತಿದ್ದಾರೆಂದು ತಿಳಿದುಕೊಳ್ಳದೆ ಅಧಿಕಾರದ ದರ್ಪದಿಂದ ತಮ್ಮ ಮನಸಿಗೆ ತೋಚಿದಂತೆ ಮಾತನಾಡಿರುವುದು ತಮ್ಮ ಸಚಿವ ಸ್ಥಾನಕ್ಕೆ ಶೋಭೆ ತರುವಂಥದ್ದಲ್ಲ” ಎಂದು ಹೇಳಿದರು.
“ಯಾರ ಕುಮ್ಮಕ್ಕಿನಿಂದ ಹೋರಾಟ ನಡೆಯುತ್ತಿದೆ ಎಂಬುದನ್ನು ಸಚಿವರು ಬಹಿರಂಗಪಡಿಸಬೇಕು. ಇವರು ಆಯ್ಕೆಯಾಗಿರುವುದು ಜನರ ಮತಭಿಕ್ಷೆಯಿಂದ ಎನ್ನುವುದನ್ನು ಬಹುಷಃ ಮರೆತಿದ್ದಾರೆ. ಜನರಿಗೆ ಅನ್ಯಾಯವಾದರೆ ಅನ್ಯಾಯವನ್ನು ಪ್ರತಿಭಟಿಸುವುದು ಸಂಘಟನೆಗಳ ಕರ್ತವ್ಯ. ಇಲ್ಲಿ ಯಾರದೋ ಮಾತನ್ನು ಕೇಳಿ, ಯಾರದೋ ಮುಲಾಜಿಗೆ ಒಳಗಾಗುವ ಅಗತ್ಯವಿಲ್ಲ” ಎಂದಿದ್ದಾರೆ.
“ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ನಡೆಸಲು ಉದ್ದೇಶಿರುವುದು ಕೋಟಿ ಕೋಟಿ ಹಣವನ್ನು ಲೂಟಿ ಮಾಡುವ ಹುನ್ನಾರದಿಂದಲೇ ಹೊರತು, ಜನ ಹಿತಕ್ಕಲ್ಲ. ಇದರಲ್ಲಿ ಪಿಪಿಪಿ ಮಾದರಿ ಬೇಕಾಗಿರುವುದು ಜನಪ್ರತಿನಿಧಿಗಳಿಗೇ ಹೊರೆತು ಜನಸಾಮಾನ್ಯರಿಗಲ್ಲ. ಪಿಪಿಪಿ ಪಿಪಿ ಮಾಡುವುದರಿಂದ ಜನಪ್ರತಿನಿಧಿಗಳಿಗೆ ಲಾಭವಿದೆಯೇ ಹೊರೆತು ಜನಸಾಮಾನ್ಯರಿಗೆ ನಯಾಪೈಸ ಲಾಭವಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಶಿರೋಡಾ ಕಡಲತೀರದಲ್ಲಿ ಭೀಕರ ದುರಂತ; ಏಳು ಮಂದಿ ನೀರುಪಾಲು, ಓರ್ವನ ಸ್ಥಿತಿ ಗಂಭೀರ
“ಒಂದು ವೇಳೆ ಸಚಿವರು ಹೇಳಿದಂತೆ ಪಿಪಿಪಿ ಮಾದರಿಯಿಂದ ಖಾಸಗಿಯವರಿಗೆ ಅನುಕೂಲವಿಲ್ಲ ಎಂದಾದರೆ, 500 ಕೋಟಿ ರೂಪಾಯಿ ಬಂಡವಾಳ ಹೂಡಲಾಗುವುದೆಂದು ಶಾಸಕ ಯತ್ನಾಳ್ ಅವರು ಏಕೆ ಹೇಳಿದ್ದಾರೆ? ಇದು ತಮ್ಮ ಲಾಭಕ್ಕಾಗಿ ಹೊರತಾಗಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವುದಕಲ್ಲ. ಇದನ್ನು ಖಂಡಿಸಿ ನಾವು ಹೋರಾಟ ನಡೆಸುತ್ತಿದ್ದರೆ ಹೋರಾಟಗಾರರಿಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ” ಎಂದು ಎಚ್ಚರಿಸಿದ್ದಾರೆ.
