ವಿಜಯಪುರ ನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಪ್ರಸ್ತಾವನೆ ಕೈ ಬಿಡಬೇಕೆಂದು ಆಗ್ರಹಿಸಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ ಸಮಿತಿಯಿಂದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.
ಕಲಬುರ್ಗಿಯಲ್ಲಿ ಸಚಿವರನ್ನು ಭೇಟಿಯಾದ ಸಮಿತಿಯವರು, ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಆರಂಭಿಸಲು ಜಿಲ್ಲೆಯ ಜನರ ತೀವ್ರ ವಿರೋಧವಿದೆ. ಯಾವುದೇ ಕಾರಣಕ್ಕೂ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಬಾರದು ಎಂದು ಒತ್ತಾಯಿಸಿದ್ದಾರೆ.
ನಿಯೋಗದಲ್ಲಿ ಬಿ ಭಗವಾನ ರೆಡ್ಡಿ, ಅಕ್ರಮ್ ಮಾಶಾಳಕರ, ಎಚ್ ಟಿ ಭರತ ಕುಮಾರ , ಅಲ್ಲಮಪ್ರಭು, ಗುರುರಾಜ ದೇಶಪಾಂಡೆ ಇದ್ದರು.
ಪೂರ್ಣ ಪ್ರಮಾಣದಲ್ಲಿ ಸರಕಾರದ ವತಿಯಿಂದಲೇ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಆಗ್ರಹಿಸಿ ಹೋರಾಟ ರೂಪಿಸಲು ಸೆಪ್ಟೆಂಬರ್ 3 ರಂದು ಬೆಳಗ್ಗೆ 11ಕ್ಕೆ ವಿಜಯಪುರ ಡಾ.ಬಿ ಆರ್ ಅಂಬೇಡ್ಕರ್ ಸಭಾಭವನದಲ್ಲಿ ಸಭೆ ಕರೆಯಲಾಗಿದೆ ಎಂದು ಹೋರಾಟ ಸಮಿತಿಯ ಮುಖಂಡ ಎಚ್ ಟಿ ಭರತ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ಸೆ.3ರಿಂದ ರಾಜ್ಯಾದ್ಯಂತ ಸೀರತ್ ಅಭಿಯಾನ
ಜಿಲ್ಲೆಯ ಜನತೆ ಒಂದಾಗಿ ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಒತ್ತಾಯಿಸಿ ಸರಕಾರದ ಗಮನ ಸೆಳೆಯಬೇಕಾಗಿದೆ. ಅದಕ್ಕಾಗಿ ಪಕ್ಷಾತೀತವಾಗಿ ಹೋರಾಟ ಸಮಿತಿ ರಚಿಸಲಾಗಿದೆ. ಹೀಗಾಗಿ ಸಭೆಗೆ ಸಂಘ ಸಂಸ್ಥೆಗಳು ಮುಖಂಡರು ಸದಸ್ಯರು ಭಾಗವಹಿಸಬೇಕೆಂದು ತಿಳಿಸಿದ್ದಾರೆ.