ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಬಲಾದ ಗ್ರಾಮದ ಒಡಲ ಧ್ವನಿ ಮಹಿಳಾ ಒಕ್ಕೂಟವು ಕೃಷಿಯಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣದತ್ತ ಒಂದು ಹೊಸ ಉಪಕ್ರಮವನ್ನು ಕೈಗೊಂಡಿದೆ. ಈ ಉಪಕ್ರಮದ ಅಡಿಯಲ್ಲಿ, ಸಣ್ಣ ಮತ್ತು ಅತೀ ಸಣ್ಣ ಭೂಮಿ ಹೊಂದಿರುವ 20 ಮಹಿಳಾ ರೈತರಿಗೆ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಎಡೆ ಹೊಡೆಯುವ ಸೈಕಲ್‌ನ್ನು ವಿತರಿಸಲಾಗಿದೆ.
ಈ ಸಾಧನವು ಮಹಿಳೆಯರ ಕೃಷಿ ಕಾರ್ಯಗಳನ್ನು ಸುಲಭಗೊಳಿಸಿ, ಅವರ ಶ್ರಮ ಮತ್ತು ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ.
ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ನಿರತರಾಗಿರುವ ಗ್ರಾಮೀಣ ಮಹಿಳೆಯರು ಎದುರಿಸುತ್ತಿರುವ ಸವಾಲುಗಳನ್ನು ಮನಗಂಡು, ಈ ಉಪಕರಣಗಳನ್ನು ವಿತರಿಸಲಾಗಿದೆ. ಪರಿಣಾಮಕಾರಿ ಯಂತ್ರವು, ಭೂಮಿಯಲ್ಲಿ ಕಳೆ ಕೀಳುವಂತಹ ಕಠಿಣ ಕೆಲಸಗಳನ್ನು ಸುಲಭವಾಗಿ ಮಾಡಲು ಸಹಕರಿಸುತ್ತದೆ. ಹೀಗಾಗಿ, ಈ ಉಪಕರಣಗಳ ವಿತರಣೆಯು ಮಹಿಳಾ ರೈತರಲ್ಲಿ ಹೊಸ ಹುರುಪು ಮತ್ತು ಆತ್ಮವಿಶ್ವಾಸ ತುಂಬುತ್ತದೆ.

ಇದನ್ನೂ ಓದಿ: ವಿಜಯಪುರ | ವಿದ್ಯಾರ್ಥಿನಿಯರ ವ್ಯಕ್ತಿತ್ವ ವಿಕಸನಕ್ಕೆ ಅಕ್ಕಮಹಾದೇವಿ ವಿವಿ ಕಟಿಬದ್ಧ: ಕುಲಪತಿ ವಿಜಯಾ
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಶಂಕರ ಮೂರ್ತಿ, ವಿಜ್ಞಾನಿಗಳಾದ ಡಾ. ವೀಣಾ ಚಂದಾವರಿ ಹಾಗೂ ಡಾ. ಪ್ರಕಾಶ ರಾಠೋಡ್ ಅವರ ಬೆಂಬಲ ಮತ್ತು ಮಾರ್ಗದರ್ಶನದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಅವರ ದೂರದೃಷ್ಟಿ ಮತ್ತು ನಿಸ್ವಾರ್ಥ ಸೇವೆಯು ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನದಲ್ಲಿ ಮಹತ್ತರ ಬದಲಾವಣೆ ತರಲು ಪ್ರೇರಣೆಯಾಗಿದೆ. ‘ಒಡಲ ಧ್ವನಿ ಮಹಿಳಾ ಒಕ್ಕೂಟ’ ಈ ಸಹಕಾರಕ್ಕೆ ಸದಾ ಋಣಿಯಾಗಿರುತ್ತವೆ ಎಂದು ಒಡಲ ಧ್ವನಿ ಮಹಿಳಾ ಒಕ್ಕೂಟದ ಮುಖ್ಯಸ್ಥೆ ಡಾ. ಭುವನೇಶ್ವರಿ ತಿಳಿಸಿದ್ದಾರೆ.