ಮಹಿಳೆಯರ ಜ್ವಲಂತ ಸಮಸ್ಯೆಗಳಾದ ಬಾಲ್ಯವಿವಾಹ, ಭ್ರೂಣಹತ್ಯೆ, ಲಿಂಗ ತಾರತಮ್ಯ, ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ಅಪೌಷ್ಟಿಕತೆ, ಅಭದ್ರತೆ ಹಾಗೂ ಉದ್ಯೋಗಸ್ಥ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಎಲ್ಲ ಸ್ಥರದ ಮಹಿಳಾ ಸಮುದಾಯವನ್ನು ಸಂಘಟಿಸುತ್ತಿದೆ ಎಂದು ಮಹಿಳಾ ಸಂಘಟನೆ ವಿಜಯಪುರ ಜಿಲ್ಲಾ ಅಧ್ಯಕ್ಷೆ ಗೀತಾ ಎಚ್ ಟಿ ಹೇಳಿದರು.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(AIMSS) ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಜಿಲ್ಲಾ ಕಾರ್ಯದರ್ಶಿ ಶಿವ ಬಾಳಮ್ಮ ಕೊಂಡಗುಳಿ ಮಾತನಾಡಿ, “ದೇಶಾದ್ಯಂತ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಘೋರ ಅತ್ಯಾಚಾರ, ಗುಂಪು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ತಾರ್ಕಿಕ ಹಂತಕ್ಕೆ ತಲುಪಲು ದೀರ್ಘಕಾಲ ತೆಗೆದುಕೊಳ್ಳುವುದು, ಹಲವು ಪ್ರಕರಣಗಳಲ್ಲಿ ಪ್ರಭಾವಿ ಆರೋಪಿಗಳು ಖುಲಾಸೆಯಾಗಿರುವುದು ಅಥವಾ ನಿಜವಾದ ಆರೋಪಿಗಳು ಸಿಗದೇ ಇರುವುದು ಸಾರ್ವಜನಿಕರಲ್ಲಿ ಸಿಟ್ಟು ಮಡುಗಟ್ಟುವಂತೆ ಮಾಡಿದೆ” ಎಂದು ಹೇಳಿದರು.
“ರಾಜ್ಯದಲ್ಲಿ ಇಂದಿಗೂ ಕದ್ದುಮುಚ್ಚಿ ನಡೆಯುತ್ತಿರುವ ಭ್ರೂಣಹತ್ಯೆಯ ಘಟನೆಗಳು ಸಮಾಜದಲ್ಲಿರುವ ಹಳೆಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ. 2024-25ರ ಅವಧಿಯಲ್ಲಿ 700ಕ್ಕೂ ಹೆಚ್ಚು ಬಾಲ್ಯವಿವಾಹಗಳು ವರದಿಯಾಗಿದ್ದು, ಕಳೆದ ಮೂರು ವರ್ಷಗಳಲ್ಲಿ(2023-ಜುಲೈ 2025) 80,813 ಬಾಲ ಗರ್ಭಿಣಿ ಪ್ರಕರಣಗಳು(ಆರ್‌ಸಿಎಚ್ ಪೋರ್ಟಲ್) ಪತ್ತೆಯಾಗಿರುವುದು ಆತಂಕವನ್ನು ಮೂಡಿಸಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಹಣಕಾಸು ದುರುಪಯೋಗ ಆರೋಪ: ಪಿಡಿಒ ಅಬ್ದುಲ್ ರಜಾಕ್ ಮನಿಯಾರ ಅಮಾನತು
“ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ಮೇಲೆ ಪ್ರಸ್ತಾಪಿಸಿರುವ ಹಲವಾರು ಸಮಸ್ಯೆಗಳ ಕುರಿತು ರಾಜ್ಯದ ಮಹಿಳೆಯರ ಧ್ವನಿಯಾಗಿ AIMSS ರಾಜ್ಯ ಸಮಿತಿಯು ಈ ಮೂಲಕ ಒತ್ತಾಯಿಸುತ್ತಿದ್ದು, ಪರಿಹಾರವನ್ನು ನಿರೀಕ್ಷಿಸುತ್ತಿದೆ” ಎಂದರು.
ಈ ವೇಳೆ ಜಿಲ್ಲಾ ಜಂಟಿ ಕಾರ್ಯದರ್ಶಿ ಶಿವರಂಜನಿ, ಲಲಿತ ಬಿಜ್ಜರಗಿ ಇದ್ದರು.