ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೆಸರಟ್ಟಿ–ಬಿಂಜಲಭಾವಿ ಮಾರ್ಗವಾಗಿ ಕಲಿಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ತಕ್ಷಣ ದುರಸ್ತಿ ಕೈಗೊಳ್ಳುವಂತೆ ಆಗ್ರಹಿಸಿ ರಾಷ್ಟ್ರೀಯ ರೈತ ಸಂಘ ಹಮ್ಮಿಕೊಂಡಿರುವ ನಿರಂತರ ಧರಣಿಗೆ ಅಂಬೇಡ್ಕರ್ ಸೇನೆ ತಾಳಿಕೋಟೆ ತಾಲೂಕು ಘಟಕ ಬೆಂಬಲ ಸೂಚಿಸಿತು.
ಬಿಂಜಲಭಾವಿ ಹಳ್ಳದ ಸಮೀಪ ರಾಷ್ಟ್ರೀಯ ರೈತ ಸಂಘದ ತಾಲೂಕು ಅಧ್ಯಕ್ಷ ಅಶೋಕಗೌಡ ಪಾಟೀಲ್ ನೇತೃತ್ವದಲ್ಲಿ ಮೂರನೇ ದಿನವೂ ಪ್ರತಿಭಟನೆ ಮುಂದುವರೆದಿದೆ. ಈ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅಂಬೇಡ್ಕರ್ ಸೇನೆ ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಬಸ್ಸು ಮಾದರ್, “ಕೆಸರಟ್ಟಿ–ಕಲಿಕೇರಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಹಲವು ಬಾರಿ ಮನವಿ ಹಾಗೂ ಹೋರಾಟ ನಡೆಸಿದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸದಿರುವುದು ಅವರ ಬೇಜವಾಬ್ದಾರಿತನವನ್ನು ತೋರಿಸುತ್ತದೆ” ಎಂದು ಆರೋಪಿಸಿದರು.
“ದೇವರಹಿಪ್ಪರಗಿ ಕ್ಷೇತ್ರದ ಶಾಸಕರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೂ, ಜಿಲ್ಲೆಯಲ್ಲೇ ಅತ್ಯಂತ ಹಾಳಾದ ರಸ್ತೆಯೆಂದು ಹೆಸರಾದ ಈ ರಸ್ತೆಯ ಬಗ್ಗೆ ಗಮನ ಹರಿಸಿಲ್ಲ. ತಕ್ಷಣ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸದಿದ್ದರೆ ವಿವಿಧ ಸಂಘಟನೆಗಳೊಂದಿಗೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಈಗಾಗಲೇ ರಾಷ್ಟ್ರೀಯ ರೈತ ಸಂಘ ನಿರಂತರ ಧರಣಿ ನಡೆಸುತ್ತಿದ್ದು, ಅದಕ್ಕೆ ಬೆಂಬಲವಾಗಿ ವಿವಿಧ ಸಂಘಟನೆಗಳು ಸೇರ್ಪಡೆಯಾಗಲಿವೆ. ಇದೇ ಹಿನ್ನೆಲೆಯಲ್ಲಿ ಮುಂದಿನ ಸೋಮವಾರ ಕೆಸರಟ್ಟಿ ಕ್ರಾಸ್ ಬಳಿ ದೇವರಹಿಪ್ಪರಗಿ ಮುಖ್ಯರಸ್ತೆಯಲ್ಲಿ ‘ರಸ್ತಾ ರೋಕೋ’ (ರಸ್ತೆ ತಡೆ) ಪ್ರತಿಭಟನೆ ನಡೆಸಲಾಗುವುದು” ಎಂದು ಘೋಷಿಸಿದರು.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ರೈತ ಸಂಘದ ಜಿಲ್ಲಾ ಪದಾಧಿಕಾರಿಗಳಾದ ಹಣಮಂತ ವಡ್ಡರ್, ಗೌಡಪ್ಪಗೌಡ ಹಳೆಮನಿ ಸೇರಿದಂತೆ ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷ ಗೋಪಾಲ ಕಟ್ಟಿಮನಿ, ರಮೇಶ್ ಮಾದರ್, ಮಲ್ಲಪ್ಪ ಶಿರೋಳ, ಕಾಶಿನಾಥ ಕಟ್ಟಿಮನಿ, ಬಾಬುಗೌಡ ಪಾಟೀಲ್, ಶಿವಪ್ಪ ಡೋಣೂರ, ಭೀಮನಗೌಡ ಪಾಟೀಲ್, ಭಾಷಾಸಾಬ ಮನಗೂಳಿ, ವಿಜಯಕುಮಾರ್ ಉಕ್ಕಲಿ ಇದ್ದರು.





