ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಲ್ಲಿ ಈವರೆಗೆ ಆಡಳಿತ ನಡೆಸಿದ ಯಾವ ಸರ್ಕಾರವೂ ಮುತುವರ್ಜಿ ವಹಿಸಿಲ್ಲ. ಪರಿಣಾಮ ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೀರಾವರಿ ಯೋಜನೆಗಳ ಪೂರ್ಣ ಪ್ರಮಾಣದ ಜಾರಿಯಾಗದೆ, ರೈತರು ಕೃಷಿಗೆ ನೀರಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಖ್ಯಾತ ನೀರಾವರಿ ತಜ್ಞ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ ಹೇಳಿದರು.
ವಿಜಯಪುರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಕೃಷ್ಣಾ ಕೊಳ್ಳ ಜಲಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯ ಸರ್ಕಾರ ಮೊದಲಿನಿಂದಲೂ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸುತ್ತಾ ಬಂದಿದೆ. ಉತ್ತರ ಕರ್ನಾಟಕ ಎಂದರೆ ಸರ್ಕಾರಕ್ಕೆ ಒಂದು ರೀತಿಯಲ್ಲಿ ಅಲರ್ಜಿ ಇದ್ದಂತಿದೆ. ಈ ಭಾಗದಲ್ಲಿ ಬೃಹತ್ ಜಲಾಶಯಗಳನ್ನು ನಿರ್ಮಿಸಿದ್ದರೂ ಅವುಗಳ ನೀರನ್ನು ಸಮರ್ಪಕವಾಗಿ ರೈತರ ಜಮೀನುಗಳಿಗೆ ತಲುಪಿಸುವಲ್ಲಿ ಸರ್ಕಾರ ವಿಫಲವಾಗಿದೆ” ಎಂದರು.
ವಿಜಯಪುರ ಜಿಲ್ಲೆಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ತುಂಗಭದ್ರಾ, ಹಿಡಕಲ್ ಸೇರಿದಂತೆ ಹಲವು ಪ್ರಮುಖ ಜಲಾಶಯಗಳು ಉತ್ತರ ಕರ್ನಾಟಕದಲ್ಲಿದ್ದರೂ ಈ ಭಾಗದ ರೈತರು ನಿರಂತರವಾಗಿ ನೀರಿನಿಂದ ವಂಚಿತರಾಗುತ್ತಿದ್ದಾರೆ. ನೀರಾವರಿಗೆ ಅಗತ್ಯ ಆದ್ಯತೆ ನೀಡದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ದೂರಿದರು.
ಜಲಸಂಪನ್ಮೂಲ ಸಚಿವ ಸ್ಥಾನವನ್ನು ದಕ್ಷಿಣ ಕರ್ನಾಟಕದವರಿಗೆ ನೀಡಲಾಗಿದೆ. ನಮ್ಮ ಭಾಗದ ನೀರಾವರಿ ಸಮಸ್ಯೆ ಹಾಗೂ ರೈತರ ಸಂಕಷ್ಟಗಳ ಬಗ್ಗೆ ಸಮರ್ಪಕ ಅರಿವು ಇಲ್ಲದ ಕಾರಣ ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗುತ್ತಿಲ್ಲ. ಜಲಸಂಪನ್ಮೂಲ ಸಚಿವರಾದ ಬಳಿಕ ಆಲಮಟ್ಟಿ ಜಲಾಶಯದ ಕುರಿತು ಒಂದು ದಿನವೂ ಹೇಳಿಕೆ ನೀಡಿಲ್ಲ. ಇಡೀ ರಾಜ್ಯದ ಜಲಸಂಪನ್ಮೂಲ ನಿರ್ವಹಿಸುವ ಶಕ್ತಿ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಅರಿವು ಸಚಿವರಿಗೆ ಇರಬೇಕು ಎಂದು ಹೇಳಿದರು.
ಈ ಹಿಂದೆ ಬಿ.ಎಸ್ ಪಾಟೀಲ ಮನಗೂಳಿ ಅವರಿಗೆ ಉತ್ತರ ಕರ್ನಾಟಕದ ಪ್ರತ್ಯೇಕ ಜಲಸಂಪನ್ಮೂಲ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಕೇವಲ ಆರು ತಿಂಗಳಲ್ಲೇ ಆ ಖಾತೆಯನ್ನು ಹಿಂದಕ್ಕೆ ಪಡೆಯಲಾಯಿತು. ಇದೀಗ ಮತ್ತೆ ಉತ್ತರ ಕರ್ನಾಟಕದ ಯಾವುದೇ ಶಾಸಕರಿಗೆ ಪ್ರತ್ಯೇಕವಾಗಿ ಜಲಸಂಪನ್ಮೂಲ ಖಾತೆ ನೀಡಬೇಕು. ಈ ಖಾತೆಯನ್ನು ಶಾಶ್ವತವಾಗಿ ಉಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕೃಷ್ಣಾ ಕೊಳ್ಳ ಜಲಸಂರಕ್ಷಣಾ ಹೋರಾಟ ಸಮಿತಿ ಮುಖಂಡ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದ್ದರೂ ರಾಜ್ಯ ಸರ್ಕಾರ ಇದುವರೆಗೆ ಬಾಗಿನ ಅರ್ಪಣೆಗೆ ಮುಂದಾಗಿಲ್ಲ. ಕೃಷ್ಣಾ ಆರತಿ ಬಗ್ಗೆಯೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಡೀ ರಾಜ್ಯದ ಜಲಸಂಪನ್ಮೂಲ ಖಾತೆಯನ್ನು ಒಬ್ಬ ಸಚಿವರು ಮಾತ್ರ ನಿರ್ವಹಿಸುವುದು ಕಷ್ಟ. ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಜಲಸಂಪನ್ಮೂಲ ಖಾತೆ ನೀಡಿದರೆ ಈ ಭಾಗದ ಬಾಕಿ ಇರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ರೈತರಿಗೆ ಸಮರ್ಪಕವಾಗಿ ನೀರು ಒದಗಿಸಲು ಸಾಧ್ಯವಾಗಲಿದೆ. ಆದ್ದರಿಂದ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಜಲಸಂಪನ್ಮೂಲ ಸಚಿವ ಸ್ಥಾನ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗುರುರಾಜ ಪಡಶೆಟ್ಟಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.




