ವಿಜಯಪುರ ಜಿಲ್ಲೆಯಲ್ಲಿ 2026-27ನೇ ಸಾಲಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದರೂ ಕೇವಲ ಮೂರು ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಪರಿಗಣಿಸಿ ಉಳಿದ ತಾಲೂಕುಗಳನ್ನು ಕೈಬಿಟ್ಟಿರುವುದನ್ನು ಖಂಡಿಸಿ, ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಡೆಸುತ್ತಿರುವ ಅನಿರ್ದಿಷ್ಟ ಹೋರಾಟ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿತು.
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಪ್ರತಿಭಟನೆಯಲ್ಲಿ ನೂರಾರು ರೈತರು ಪಾಲ್ಗೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಹದಗೆಟ್ಟಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕೇವಲ ಮೂರು ತಾಲೂಕುಗಳಿಗೆ ಸೀಮಿತಗೊಳಿಸದೆ ವಿಜಯಪುರ ಜಿಲ್ಲೆಯ 13 ತಾಲೂಕುಗಳನ್ನೂ ಬರಪೀಡಿತ ಪ್ರದೇಶವೆಂದು ಘೋಷಿಸಿ ಸಮರ್ಪಕ ಪರಿಹಾರ ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಪ್ರಾಂತ ರೈತ ಸಂಘದ ಮುಖಂಡ ಅಣ್ಣರಾಯ ಈಳಗೇರ್ ಮಾತನಾಡಿ, “ಬರ ಎಂಬುದು ವಿಜಯಪುರ ಜಿಲ್ಲೆಗೆ ಹೊಸದಲ್ಲ. ಶತಮಾನದಿಂದಲೂ ಜಿಲ್ಲೆ ಒಣ ಬರ ಹಾಗೂ ಹಸಿ ಬರದ ಸಂಕಷ್ಟವನ್ನು ಎದುರಿಸುತ್ತಲೇ ಬಂದಿದೆ. 1927ರಲ್ಲಿ ಬ್ರಿಟಿಷ್ ಅಧಿಕಾರಿಗಳು ವಿಜಯಪುರದ ಬರ ಪರಿಸ್ಥಿತಿಯನ್ನು ಗಮನಿಸಿ ₹40 ಸಾವಿರ ವೆಚ್ಚದಲ್ಲಿ ಬರಗಾಲ ನಿವಾರಣಾ ಕೇಂದ್ರ ಸ್ಥಾಪಿಸಿದ್ದರು. ಅಲ್ಲದೆ ಸುಮಾರು 1,800 ರೈತರನ್ನು ಒಗ್ಗೂಡಿಸಿ ಬರ ನಿರ್ವಹಣಾ ಸಹಕಾರ ಸಂಘವನ್ನೂ ರಚಿಸಿದ್ದರು” ಎಂದು ಇತಿಹಾಸವನ್ನು ನೆನಪಿಸಿದರು.
ಇಂದಿಗೂ ಜಿಲ್ಲೆಯ ಬರ ಪರಿಸ್ಥಿತಿಯಲ್ಲಿ ಯಾವುದೇ ಮೂಲಭೂತ ಬದಲಾವಣೆ ಆಗಿಲ್ಲ. ಕಳೆದ ನೂರು ವರ್ಷಗಳಲ್ಲಿನ ಬರ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ವಿಜಯಪುರವನ್ನು ಸಂಪೂರ್ಣ ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
- ರೈತರ ಪ್ರಮುಖ ಬೇಡಿಕೆಗಳು
- ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಬೇಕು.ಬರದಿಂದ ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು.
- ಬೆಳೆ ವಿಮೆ ಪಾವತಿಸಿರುವ ರೈತರಿಗೆ 50ರಷ್ಟು ಮಧ್ಯಂತರ ವಿಮಾ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು.ಜಿಲ್ಲೆಯ ಎಲ್ಲ ಹಳ್ಳ, ಕೊಳ್ಳ, ಕೆರೆ ಹಾಗೂ ಕಾಲುವೆಗಳನ್ನು ಭರ್ತಿ ಮಾಡಬೇಕು.ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವಿನ ವ್ಯವಸ್ಥೆ ಕಲ್ಪಿಸಬೇಕು.
- ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಮುಖಂಡರಾದ ಸುರೇಖಾ ರಜಪೂತ, ಶ್ರೀಶೈಲ ಮುಳಜಿ, ಬಸವರಾಜ ಹಂದ್ರಾಳ, ಸುರೇಶ, ನರೇಂದ್ರಬಾಬು ಬರಡ್ಡಿ, ರವಿ ಬರಡ್ಡಿ, ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ರಾಮನಗೌಡ ಪಾಟೀಲ, ಮಹಾದೇವ ಬನಸೋಡೆ, ಮಲ್ಲಿಕಾರ್ಜುನ ಕೆಂಗನಾಳ, ಈರಪ್ಪ ಕುಳೆಕುಮಟಗಿ, ಶಿವಾನಂದ ಹಿರೇಮಠ, ವಸಂತ ಭೈರಮಾಡಿ, ಗೇನಪ್ಪ ಬಿರಾದಾರ, ಚಂದ್ರಶೇಖರಯ್ಯ ಹಿರೇಮಠ, ಮುತ್ತು ನಾದ, ಶಂಕರಗೌಡ ಬಿರಾದಾರ, ಗಂಗಾಧರ ಬಡಿಗೇರ್, ಕಲ್ಲಪ್ಪ ಪಾರಶೆಟ್ಟಿ, ಸಿದ್ದರಾಮ ಕುಳೆಕುಮಟಗಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.





