ಸಂಸತ್ ಮಾರ್ಗದತ್ತ ನಡೆಯಬೇಕಿದ್ದ ಶಾಂತಿಯುತ ಪ್ರತಿಭಟನಾ ಮೆರವಣಿಗೆಯಲ್ಲಿ ದೆಹಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ಹಾಗೂ ಅಶ್ರುವಾಯು ಶೆಲ್ ದಾಳಿಯನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ವಿಜಯಪುರ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ ಕೊಂಡಗೂಳಿ ಸೋಮವಾರ ಪತ್ರಿಕಾ ಪ್ರಕಟಣೆ ನೀಡಿ, “ಸಂಸತ್ ಮೆರವಣಿಗೆ ಆರಂಭಕ್ಕೂ ಮುನ್ನವೇ ಪ್ರತಿಭಟನೆಯನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪೊಲೀಸರನ್ನು ಬಳಸಿಕೊಂಡು ಪ್ರತಿಭಟನಾಕಾರರ ಮೇಲೆ ದಮನಕಾರಿ ಕ್ರಮ ಕೈಗೊಂಡಿದೆ” ಎಂದು ಆರೋಪಿಸಿದ್ದಾರೆ.
ಪ್ರತಿಭಟನಾಕಾರರು ಸಂಸತ್ ಮಾರ್ಗದತ್ತ ತೆರಳುವ ಮೊದಲೇ ಅವರನ್ನು ಚದುರಿಸಲು ಲಾಠಿಚಾರ್ಜ್ ನಡೆಸಿ, ಬಳಿಕ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿರುವುದು ಸರ್ಕಾರದ ಅಪ್ರಜಾತಾಂತ್ರಿಕ ಧೋರಣೆಯನ್ನು ಬಯಲಿಗೆಳೆದಿದೆ ಎಂದು ಅವರು ತಿಳಿಸಿದ್ದಾರೆ.
“ದೇಶದ ಯುವಜನತೆಗೆ ಪಾರದರ್ಶಕ, ನ್ಯಾಯಸಮ್ಮತ ಹಾಗೂ ಭ್ರಷ್ಟಾಚಾರಮುಕ್ತ ಪರೀಕ್ಷಾ ವ್ಯವಸ್ಥೆ ಕಲ್ಪಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಲ್ಲದೆ, ಲಕ್ಷಾಂತರ ವಿದ್ಯಾವಂತ ಯುವಕರಿಗೆ ಉದ್ಯೋಗ ಕಲ್ಪಿಸುವಲ್ಲಿಯೂ ಸರ್ಕಾರ ವಿಫಲವಾಗಿದ್ದು, ತನ್ನ ವೈಫಲ್ಯಗಳನ್ನು ಮರೆಮಾಚಲು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನಿಸುವ ಮಾರ್ಗ ಅನುಸರಿಸುತ್ತಿದೆ” ಎಂದು ದೂರಿದ್ದಾರೆ.
ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಮೆಟ್ರೋ ನಿಲ್ದಾಣಗಳನ್ನು ಮುಚ್ಚಿರುವ ಕ್ರಮವೂ ಸರ್ಕಾರದ ದಮನಕಾರಿ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ದೆಹಲಿ ಪೊಲೀಸರ ಲಾಠಿಚಾರ್ಜ್ ಹಾಗೂ ಅಶ್ರುವಾಯು ಶೆಲ್ ದಾಳಿಯನ್ನು ಎಐಡಿವೈಒ ತೀವ್ರವಾಗಿ ಖಂಡಿಸಿದ್ದು, ಈ ದಮನಕಾರಿ ಕ್ರಮದ ವಿರುದ್ಧ ದೇಶದಾದ್ಯಂತ ಯುವಜನತೆ ವ್ಯಾಪಕ ಪ್ರತಿಭಟನೆಗಳನ್ನು ಸಂಘಟಿಸುವಂತೆ ಸಂಘಟನೆ ಕರೆ ನೀಡಿದೆ.





