ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿ ವಿಕಲಚೇತನರಿಗೆ ಉದ್ಯೋಗಾವಕಾಶ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕನಿಷ್ಠ ಇಬ್ಬರು ವಿಕಲಚೇತನರಿಗೆ ಉದ್ಯೋಗ ನೀಡುವಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ವಿಜಯಪುರ ಜಿಲ್ಲಾಧ್ಯಕ್ಷ ವಿನೋದ ಖೇಡ ಆಗ್ರಹಿಸಿದ್ದಾರೆ.
ಈ ಕುರಿತು ವಿಜಯಪುರ ನಗರ ಶಾಸಕ ಬಸನಗೌಡ ಆರ್. ಪಾಟೀಲ ಯತ್ನಾಳ ಅವರಿಗೆ ಒಕ್ಕೂಟದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ವಿನೋದ ಖೇಡ ಮಾತನಾಡಿ, “ವಿಜಯಪುರ ಜಿಲ್ಲೆಯಲ್ಲಿ ಅನೇಕ ವಿಕಲಚೇತನರು ಉನ್ನತ ಶಿಕ್ಷಣ ಪಡೆದಿದ್ದರೂ ಸೂಕ್ತ ಉದ್ಯೋಗಾವಕಾಶ ಇಲ್ಲದೆ ನಿರುದ್ಯೋಗಿಗಳಾಗಿ ಉಳಿದಿದ್ದಾರೆ. ಸರ್ಕಾರ ವಿಕಲಚೇತನರ ಸಬಲೀಕರಣಕ್ಕಾಗಿ ಹಲವು ಕಾಯ್ದೆ ಮತ್ತು ಯೋಜನೆಗಳನ್ನು ಜಾರಿಗೊಳಿಸಿದ್ದರೂ, ಅವುಗಳ ಪರಿಣಾಮಕಾರಿ ಅನುಷ್ಠಾನದ ಕೊರತೆಯಿಂದ ಅರ್ಹರಿಗೆ ಉದ್ಯೋಗ ದೊರೆಯುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕಾಯ್ದೆಯ ಆಶಯ ಅನುಷ್ಠಾನಕ್ಕಾಗಿ ವಿಕಲಚೇತನರ ಹಕ್ಕುಗಳ ಅಧಿನಿಯಮ-2016ರ ಆಶಯದಂತೆ ವಿಕಲಚೇತನರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಬೇಕು. ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವಾಗ ವಿಕಲಚೇತನರಿಗೂ ಅವಕಾಶ ನೀಡುವಂತೆ ಇಲಾಖೆಗಳ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡಬೇಕು” ಎಂದು ಮನವಿ ಮಾಡಿದರು.
ವಿದ್ಯಾರ್ಹತೆ ಹೊಂದಿರುವ ವಿಕಲಚೇತನರು ಸ್ವಾವಲಂಬಿ ಜೀವನ ನಡೆಸಲು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ನೆರವಾಗಲಿದೆ. ಈ ಸಂಬಂಧ ಅಂಗವಿಕಲರ ಹಕ್ಕುಗಳ ಆಯುಕ್ತರ ಕಚೇರಿಯಿಂದ ಹೊರಡಿಸಲಾದ ಪತ್ರ ಹಾಗೂ ವಿಜಯಪುರ ಜಿಲ್ಲಾಧಿಕಾರಿಗಳ ಪತ್ರವನ್ನು ಉಲ್ಲೇಖಿಸಿ ಒಕ್ಕೂಟ ಮನವಿ ಸಲ್ಲಿಸಿದೆ.
ವಿಕಲಚೇತನರ ಸಾಮರ್ಥ್ಯ ಮತ್ತು ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ಸರ್ಕಾರ ಸಾಮಾಜಿಕ ನ್ಯಾಯದ ಆಶಯವನ್ನು ಸಾಕಾರಗೊಳಿಸಬೇಕು. ಜಿಲ್ಲೆಯ ವಿಕಲಚೇತನರ ಉದ್ಯೋಗ ಸಮಸ್ಯೆಗಳಿಗೆ ಸ್ಪಂದಿಸಿ, ಅರ್ಹರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಶಾಸಕರು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ನಕಲಿ ವೈದ್ಯರಿಗೆ ಔಷಧ ಪೂರೈಕೆ : 7 ಮೆಡಿಕಲ್‌ಗಳ ಪರವಾನಗಿ ಅಮಾನತು
ಈ ಸಂದರ್ಭದಲ್ಲಿ ಎ.ಎ. ವಾಲೀಕಾರ, ಲಾಯಪ್ಪ ಇಂಗಳೆ, ಎ.ಟಿ. ಗುನ್ನಾಪುರ, ಗಣೇಶ ಡೋಣೂರ, ಅನಿಲ ಇಕ್ಕಡಿ, ಮಹಾದೇವಪ್ಪ ತೇಲಿ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.





