ರಾಜ್ಯದ ರೈತರ ವಾಸ್ತವ ಸಂಕಷ್ಟವನ್ನು ಪರಿಗಣಿಸಿ ಬರ ಘೋಷಣೆಗೆ ಸಂಬಂಧಿಸಿದ ಕಠಿಣ ಮಾನದಂಡಗಳನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಬೇಕು. ಅರ್ಹ ರೈತರಿಗೆ ಸಕಾಲದಲ್ಲಿ ಪರಿಹಾರ ದೊರೆಯುವಂತೆ ರಾಜ್ಯಕ್ಕೆ ನ್ಯಾಯಯುತ ನೆರವು ಒದಗಿಸಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ಆಗ್ರಹಿಸಿದ್ದಾರೆ.
2020ರಲ್ಲಿ ಜಾರಿಗೊಳಿಸಲಾದ ಬರ ಮಾರ್ಗಸೂಚಿಗಳಡಿ ಮಳೆ ಕೊರತೆ ಮಾತ್ರವಲ್ಲದೆ ಉಪಗ್ರಹ ಆಧಾರಿತ ಮಾಹಿತಿ, ಮಣ್ಣಿನ ತೇವಾಂಶ, ಬೆಳೆ ಹಾನಿ ಸೇರಿದಂತೆ ಹಲವು ತಾಂತ್ರಿಕ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪರಿಗಣಿಸಲಾಗುತ್ತಿದೆ. ಇದರಿಂದ ನೆಲಮಟ್ಟದಲ್ಲಿ ಬರದ ತೀವ್ರತೆ ಎದುರಿಸುತ್ತಿರುವ ಹಲವು ಪ್ರದೇಶಗಳನ್ನು ಬರಪೀಡಿತವೆಂದು ಘೋಷಿಸಲು ರಾಜ್ಯಗಳಿಗೆ ತೊಡಕಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ರೈತರ ಬದುಕು ರಕ್ಷಿಸುವುದೇ ನಿಯಮಗಳ ಉದ್ದೇಶವಾಗಬೇಕು. ನಿಯಮಗಳೇ ರೈತರ ನೆರವಿಗೆ ಅಡ್ಡಿಯಾಗಬಾರದು. ರಾಜ್ಯಗಳ ಭೌಗೋಳಿಕ ಹಾಗೂ ಹವಾಮಾನ ಪರಿಸ್ಥಿತಿಯನ್ನು ಪರಿಗಣಿಸಿ ಬರ ಘೋಷಣೆಯ ಮಾನದಂಡಗಳನ್ನು ಅಗತ್ಯಕ್ಕೆ ತಕ್ಕಂತೆ ಸಡಿಲಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಹಿಂದೆಂದೂ ಕಂಡು-ಕೇಳರಿಯದ ರೀತಿಯಲ್ಲಿ ಭೀಕರ ಬರಗಾಲದ ಪರಿಣಾಮ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ ಮಾತ್ರವಲ್ಲ, ಮಾನವೀಯ ಹೊಣೆಗಾರಿಕೆಯೂ ಹೌದು. ಹೀಗಾಗಿ ಕೇಂದ್ರ ಸರ್ಕಾರವು ವಿಳಂಬ ಮಾಡದೆ ರಾಜ್ಯದ ಅರ್ಹ ರೈತರಿಗೆ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನೂ ಬರಪೀಡಿತವೆಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಅಗತ್ಯ ಪರಿಹಾರ ಹಾಗೂ ನೆರವು ಒದಗಿಸಬೇಕು. ರೈತರು ಆತಂಕ ಪಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ರೈತರ ನೆರವಿಗೆ ಬದ್ಧವಾಗಿದೆ ಎಂದು ಎಂ.ಬಿ.ಪಾಟೀಲ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 101 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಒಟ್ಟು 200 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ನಿರ್ಧರಿಸಲಾಗಿದ್ದು, ಹಂತ ಹಂತವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಕಂದಾಯ ಇಲಾಖೆಯ ಹೊಣೆಗಾರಿಕೆ ಹೊಂದಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ತಿಳಿಸಿದ್ದಾರೆ ಎಂದು ಸಚಿವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಬರದ ತೀವ್ರತೆಯನ್ನು ಕಾಗದದ ಮಾನದಂಡಗಳಿಂದಷ್ಟೇ ಅಳೆಯದೆ, ಹೊಲದಲ್ಲಿರುವ ರೈತನ ಪರಿಸ್ಥಿತಿಯನ್ನೂ ಪರಿಗಣಿಸಬೇಕು. ರಾಜ್ಯದ ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಬರ ಘೋಷಣೆ ಮತ್ತು ಪರಿಹಾರ ವಿತರಣೆಯ ನಿಯಮಗಳನ್ನು ಮರುಪರಿಶೀಲಿಸಿ ಕರ್ನಾಟಕಕ್ಕೆ ನ್ಯಾಯಯುತ ಪರಿಹಾರ ಒದಗಿಸಬೇಕು ಎಂದು ಎಂ.ಬಿ.ಪಾಟೀಲ ಆಗ್ರಹಿಸಿದ್ದಾರೆ.





