ವಿಜಯಪುರ ಜಿಲ್ಲೆಯಲ್ಲಿ ಆರಂಭಗೊಳ್ಳುತ್ತಿರುವ ಕೈಗಾರಿಕಾ ಕ್ರಾಂತಿಯ ಪರಿಣಾಮ, ಭವಿಷ್ಯದಲ್ಲಿ ವಿಜಯಪುರ ಬೆಂಗಳೂರಿಗರಿಗೂ ಉದ್ಯೋಗ ನೀಡಲಿದೆ ಎಂದು ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಬಸನಗೌಡ ಎಂ. ಪಾಟೀಲ ಹೇಳಿದರು.
ವಿಜಯಪುರ ಜಿಲ್ಲೆಯ ಬಬಲೇಶ್ವರ-ತಿಕೋಟಾ ತಾಲೂಕಿನ ಗ್ರಾಮಗಳಲ್ಲಿ ಒಂದು ತಿಂಗಳ ಕಾಲ ಆಯೋಜಿಸಿರುವ ‘ಎಂಬಿಪಿ ಉತ್ಸವ’ದ ಅಂಗವಾಗಿ ಅರಕೇರಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಮಹಿಳೆಯರ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
“ಬರಗಾಲದ ಸಂದರ್ಭದಲ್ಲಿ ಈ ಭಾಗದ ಜನರು ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಗುಳೆ ಹೋಗುವುದು ಸಾಮಾನ್ಯವಾಗಿತ್ತು. ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿಯೂ ಇತ್ತು. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು” ಎಂದು ಹೇಳಿದರು.
“ನಮ್ಮ ತಂದೆ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ನೀರಾವರಿ ಸಚಿವರಾಗಿದ್ದಾಗ ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿದ್ದರು. ಇದೀಗ ಕೈಗಾರಿಕಾ ಸಚಿವರಾಗಿ ಯುವಕರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಕೈಗಾರಿಕೆಗಳು ಹಾಗೂ ಕಂಪನಿಗಳನ್ನು ವಿಜಯಪುರಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ವಿಜಯಪುರದತ್ತ ಉದ್ಯೋಗ ಅರಸಿ ಬೆಂಗಳೂರಿಗರು ಬರುವ ದಿನಗಳು ದೂರವಿಲ್ಲ” ಎಂದರು.
ರಂಗೋಲಿ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಗ್ರಾಮದ ಮುಖಂಡರಾದ ಅಶೋಕ ದಳವಾಯಿ, ಪಿರಪಟೇಲ ಪಾಟೀಲ, ಲಿಂಗು ಬೆಳ್ಳುಬ್ಬಿ, ಶಿವು ಇಂಚಗೇರಿ, ಸುರೇಶ ಭಂಡಾರಿ, ಪಾಂಡು ಲೋಣಾರಿ, ಗೋವಿಂದ ರಾಠೋಡ, ರಂಗಾ ಬರಕಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎಂ.ಬಿ. ಪಾಟೀಲ ಅವರ ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅಕ್ಟೋಬರ್ 7ರಂದು ನಡೆಯಲಿರುವ ಅವರ ಜನ್ಮದಿನದ ಪೂರ್ವಭಾವಿಯಾಗಿ ಒಂದು ತಿಂಗಳ ಕಾಲ ‘ಎಂಬಿಪಿ ಉತ್ಸವ’ ಆಯೋಜಿಸಿದ್ದಾರೆ.
ಬಬಲೇಶ್ವರ-ತಿಕೋಟಾ ತಾಲೂಕಿನ ಪ್ರತಿ ಗ್ರಾಮದಲ್ಲಿ ಕಬಡ್ಡಿ, ಕ್ರಿಕೆಟ್, ಭಜನೆ, ಜಾನಪದ ಹಾಡು ಹಾಗೂ ರಂಗೋಲಿ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ವಿಭಿನ್ನವಾಗಿ ಆಯೋಜಿಸಲಾಗುತ್ತಿದೆ.






