ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮ ಘಟ್ಟಕ್ಕೆ ಕೊಡಲಿ ಪೆಟ್ಟು; 3.5 ಲಕ್ಷ ಮರಗಳ ಮಾರಣಹೋಮಕ್ಕೆ ಸಿದ್ಧತೆ

Date:

Advertisements

ರಾಜ್ಯದ ವಿವಿಧ ಬೇಡಿಕೆ ಈಡೇರಿಸಲು ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಒಟ್ಟು 3.50 ಲಕ್ಷ ಮರಗಳನ್ನು ಕಡಿಯಲು ಸರ್ಕಾರ ಸಿದ್ಧವಾಗಿದೆ ಎಂದು ಜಿಲ್ಲೆಯಲ್ಲಿ ಇತ್ತಿಚೆಗೆ ನಡೆಯುತ್ತಿರುವ ಯೋಜನೆಗಳ‌ ಅಂಕಿ ಅಂಶ ಹೇಳುತ್ತಿವೆ.

ಜಿಲ್ಲೆಯ ಭಾಗಶಃ ಭಾಗ ಅರಣ್ಯ ಪ್ರದೇಶದಿಂದ ಕೂಡಿದ್ದು ಇದು ರಾಜ್ಯದಲ್ಲೇ ಅತಿಹೆಚ್ಚು ಅರಣ್ಯ ಸಂಪತ್ತನ್ನು ಹೊಂದಿರುವ ಜಿಲ್ಲೆ ಆಗಿದೆ. ಈ ಅರಣ್ಯ ಪ್ರದೇಶ ಅನೇಕ ಪ್ರಾಣಿಗಳಿಗೆ ಆಶ್ರಯ ತಾಣವಾಗಿದೆ ಹಾಗೆ ರಾಜ್ಯದಲ್ಲಿ ಎಲ್ಲೂ ಕಂಡುಬರದ ಮತ್ತು  ಅಳಿವಿನಂಚಿನಲ್ಲಿರುವ‌ ಸಿಂಗಳೀಕಗಳು‌ ಕೂಡ ಈ ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತವೆ. ಔಷಧ ಗುಣ ಹೊಂದಿರುವ  ಸಸಿಗಳು ಮತ್ತು ಬೆಲೆ ಬಾಳುವ ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳು ಈ ಅರಣ್ಯ ಪ್ರದೇಶದಲ್ಲಿ ಹೇರಳವಾಗಿ ಸಿಗುತ್ತವೆ. ಇಷ್ಟೆಲ್ಲಾ ವನ್ಯಸಂಪತ್ತು ಹೊಂದಿರುವ ಜಿಲ್ಲೆ ಇತ್ತೀಚಿನ ದಶಕಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ‌‌ ಆಗುತ್ತಿರುವ ಅರಣ್ಯ ನಾಶದಿಂದ ಪಶ್ಚಿಮ ಘಟ್ಟ ಅರಣ್ಯ ಪ್ರದೇಶ ಹಂತ‌ ಹಂತವಾಗಿ ನಶಿಸುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಭೂ ಕುಸಿತ,‌ ಅವಧಿಗಿಂತ ಮುಂಚೆ ಮಳೆಯಾಗುವುದು, ಮೇಘ ಸ್ಪೋಟಗಳಂತಹ ಪ್ರಕೃತಿ ವಿಕೋಪಗಳು ಪ್ರತಿ‌ ಮಳೆಗಾಲಕ್ಕೂ ಸಂಭವಿಸುತ್ತಲೇ ಇವೆ. ಇದರಿಂದ ಅನೇಕ ಪ್ರಾಣಹಾನಿ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿಗಳು ಹಾನಿಗೊಳಗುತ್ತಿವೆ. ಉತ್ತರ ಕನ್ನಡ ಜಿಲ್ಲೆ ಒಂದು ಕಾಲದಲ್ಲಿ ರಾಜ್ಯಕ್ಕೆ‌ ಆಕ್ಸಿಜನ್ ನೀಡುವ ಜಿಲ್ಲೆ ಎಂದು ಹೆಸರಾಗಿತ್ತು. ಆದರೆ ಕಳೆದ 4-5 ವರ್ಷಗಳಿಂದ ಆಗುತ್ತಿರುವ ಭೂ ಕುಸಿತದಿಂದ ಜಿಲ್ಲೆ ತನ್ನ ಸಂಪೂರ್ಣ ವೈಭವವನ್ನು ಕಳೆದುಕೊಳ್ಳುತ್ತಿದೆ.

WhatsApp Image 2025 10 07 at 1.56.18 PM

ಜಿಲ್ಲೆಯ ಒಟ್ಟು ವಿಸ್ತೀರ್ಣವು ಸುಮಾರು 10,291 ಚದರ ಕಿ.ಮೀ.‌ಇದ್ದು, ಇದರಲ್ಲಿ ಸುಮಾರು 8,000 ಚದರ ಕಿ.ಮೀ. ಪ್ರದೇಶವು ಅರಣ್ಯದಿಂದ ಆವರಿಸಿದೆ. ಈ ಅರಣ್ಯಗಳ ಬಹುಪಾಲು ಪಶ್ಚಿಮ ಘಟ್ಟದಲ್ಲಿದೆ. ಶರಾವತಿ, ಕಾಳಿ, ಅಘನಾಶಿನಿ, ಗಂಗಾವಳಿಯಂತಹ ಪ್ರಮುಖ ನದಿಗಳಿಗೆ ಇದು ಮೂಲವಾಗಿದೆ. ಈ ನದಿಗಳು ಜಿಲ್ಲೆಗೆ ಮಾತ್ರವಲ್ಲದೆ ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ಮತ್ತು ನೀರಿನ ಪೂರೈಕೆಯಲ್ಲಿ ಪ್ರಮುಖ ಆಧಾರವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಘಟ್ಟದ ಅತಿಯಾದ ಬಳಕೆಯಿಂದ ಉತ್ತರ ಕನ್ನಡ ಜಿಲ್ಲೆಯೊಂದರಲ್ಲಿಯೇ ಸರದಿಯಂತೆ ಮೂರೂವರೆ ಲಕ್ಷಕ್ಕೂ ಅಧಿಕ ಮರಗಳಿಗೆ ಆಪತ್ತು ಎದುರಾಗಿದೆ. ಆರ್ಥಿಕ ವ್ಯವಹಾರ, ಸಾರಿಗೆ, ವಿದ್ಯುತ್ ಸಂಪರ್ಕ ಸೇರಿ ಹಲವು ಸೌಕರ್ಯಕ್ಕಾಗಿ ವಿವಿಧ ಬೃಹತ್ ಯೋಜನೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಅವಧಿಯಲ್ಲಿ ಜಾರಿಯಾಗುತ್ತಿವೆ. ಈ ನೆಪದಲ್ಲಿ ಅಷ್ಟೂ ಮರಗಳನ್ನು ನೆಲಸಮ ಮಾಡಲು ಯೋಜಿಸಲಾಗಿದೆ ಎನ್ನುವ ಆತಂಕಕಾರಿ ವರದಿ ಹೊರಬಿದ್ದಿದೆ.

Advertisements

ಅವುಗಳೆಲ್ಲವೂ ಪಶ್ಚಿಮ ಘಟ್ಟವನ್ನೇ ಬಾಧಿಸುತ್ತಿರುವುದರಿಂದ ಲಕ್ಷಾಂತರ ಮರಗಳನ್ನು ಕತ್ತರಿಸಲು ಗುರುತಿಸಲಾಗಿದೆ. ಇನ್ನೂ ಕೆಲ ಯೋಜನೆಗಳಲ್ಲಿ ಮರಗಳನ್ನು ಗುರುತಿಸುವುದು ಬಾಕಿ ಇದೆ. ಇದು ಪರಿಸರ ಹೋರಾಟಗಾರರನ್ನು ಕೆರಳಿಸಿದೆ. ಪಕ್ಕದ ಹಾವೇರಿ‌ ಜಿಲ್ಲೆಗೆ ನೀರು ಕೊಡಲು ಬೇಡ್ತಿ ವರದಾ ನದಿ ಯೋಜನೆ ಹೆಸರಿನಲ್ಲಿ 243 ಹೆಕ್ಟೇರ್ ಅರಣ್ಯ, ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್‌ಗೆ 54 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಗುರುತಿಸಲಾಗಿದೆ. ಈ ಎರಡೇ ಯೋಜನೆಗಳಿಂದ ಒಂದು ಲಕ್ಷಕ್ಕೂ ಅಧಿಕ ಮರಗಳು ನಾಶವಾಗಲಿವೆ ಎಂದು ಜಿಲ್ಲೆಯ ಪರಿಸರವಾದಿಗಳು ಅಂದಾಜಿಸಿದ್ದಾರೆ. ಇನ್ನೊಂದೆಡೆ ಗೋವಾಕ್ಕೆ ವಿದ್ಯುತ್ ಕೊಡಲು ಗೋವಾ-ತಮ್ನಾರ್ ವಿದ್ಯುತ್ ಲೈನ್‌ಗೆ 72 ಸಾವಿರ ಮರಗಳು, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ 1.50 ಲಕ್ಷಕ್ಕೂ ಅಧಿಕ ಮರಗಳ ಮಾರಣ ಹೋಮ ಆಗಲಿದೆ.

WhatsApp Image 2025 10 07 at 1.55.44 PM

ತಿನೇಘಾಟ್ – ಕ್ಯಾಸಲ್ ರಾಕ್ ದ್ವಿಪಥ ರೈಲು ಮಾರ್ಗಕ್ಕೆ 3,300, ಕೈಗಾ-ಬಾರೆ ರಸ್ತೆ ವಿಸ್ತರಣೆಗೆ 1,800 ಮರ ಕತ್ತರಿಸಲು ಲೆಕ್ಕ ಹಾಕಲಾಗಿದೆ. ಶಿರಸಿ- ತಾಳಗುಪ್ಪ ರೈಲ್ವೆ ಯೋಜನೆಗೆ ಅರಣ್ಯದಲ್ಲಿ ಸರ್ವೆ ಬಾಕಿ ಇದೆ. ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಅರಣ್ಯವನ್ನೇ ಬೋಳು ಮಾಡಲಾಗುತ್ತಿದೆ. ಮತ್ತೊಂದೆಡೆ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸರಕು ಪೂರೈಸಲು ಕರಾವಳಿಯಲ್ಲಿ ಮೂರು ವಾಣಿಜ್ಯ ಬಂದರು ನಿರ್ಮಿಸಲಾಗುತ್ತಿದೆ. ಅವುಗಳಿಗೆ ಅರಣ್ಯ ಜಾಗದ ಜತೆ ಸಮುದ್ರ ಜಾಗವನ್ನೂ ಸ್ವಾಧೀನ ಮಾಡುವ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ. ಈಗಾಗಲೇ 23 ಕಿ.ಮೀ. ಕಡಲತೀರ ನೌಕಾನೆಲೆಗೆ ಸ್ವಾಧೀನ ಆಗಿದೆ.

ಒಂದು ಲಕ್ಷ ಹೆಕ್ಟೇರ್ ಅರಣ್ಯ: ಉತ್ತರ ಕನ್ನಡ ಜಿಲ್ಲೆಯ 10.25 ಲಕ್ಷ ಹೆಕ್ಟೇರ್ ಭೂ ಪ್ರದೇಶದಲ್ಲಿ 8 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವಾಗಿದೆ. ಮೂರ್ನಾಲ್ಕು ದಶಕಗಳಲ್ಲಿ ಕಾಳಿ ವಿದ್ಯುತ್ ಯೋಜನೆ, ಕೊಂಕಣ ರೈಲ್ವೆ ಸೀಬರ್ಡ್ ನೌಕಾನೆಲೆ ಮತ್ತಿತರ ಯೋಜನೆ ಹೆಸರಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಹೆಕ್ಟೇರ್ ಅರಣ್ಯವನ್ನು ಯೋಜನೆಗಳಿಗೆ ಸ್ವಾಧೀನ ಮಾಡಲಾಗಿದೆ. ಆದರೂ ಮತ್ತೆ ಮತ್ತೆ ಅರಣ್ಯವನ್ನು ಕತ್ತರಿಸಲಾಗುತ್ತಿದೆ ಎನ್ನುತ್ತಾರೆ‌ ಜಿಲ್ಲೆಯ ಪರಿಸರವಾದಿಗಳು.

ಪಶ್ಚಿಮ ಘಟ್ಟದ ಅರಣ್ಯದ  ಮೇಲೆ ಆಗುತ್ತಿರುವ ಯೋಜನಗಳ ಅಪಾಯಗಳನ್ನು ಎಚ್ಚರಿಸುವುದಕ್ಕಾಗಿಯೇ ಇತ್ತೀಚೆಗೆ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳು ಹೊನ್ನಾವರದಲ್ಲಿ ಆರು ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮ ಮಾಡಿದ್ದರು. ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಶೇ.80ರಿಂದ ಶೇ.45ಕ್ಕೆ ಇಳಿದಿದೆ. ಇದು ಅಪಾಯದ ಕರೆ ಗಂಟೆ ಆಗಿದೆ. ಆದ್ದರಿಂದ ನಾವು ನಮ್ಮ ಸುತ್ತಲಿನ ಪರಿಸರ ರಕ್ಷಣೆ ಮಾಡಬೇಕು ಹಾಗೂ ಪಶ್ಚಿಮ ಘಟ್ಟ ಅರಣ್ಯವನ್ನು ಕಾಪಾಡಬೇಕು ಎಂದು ನ್ಯಾಯಮೂರ್ತಿಗಳು ಎಚ್ಚರಿಸಿದ್ದರು.

ಕೇಣಿ ಖಾಸಗಿ ವಾಣಿಜ್ಯ ಬಂದರು ಬೇಡ್ತಿ- ವರದಾ ನದಿ ಯೋಜನೆ: ಪಶ್ಚಿಮ ಘಟ್ಟದಲ್ಲಿ ಕೈಗೊಳ್ಳುತ್ತಿರುವ ಯೋಜನೆಗಳಲ್ಲಿ ಸರಕಾರಿ ಲೆಕ್ಕಕ್ಕಿಂತಲೂ ಮೂರು ಪಟ್ಟು ಹೆಚ್ಚು ಮರಗಳನ್ನು ಕಡಿಯಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಆದ ಅರಣ್ಯ ನಾಶಕ್ಕೆ ಲೆಕ್ಕವೇ ಇಲ್ಲ. ಇದರಿಂದ ಜೀವವೈವಿಧ್ಯ ನಾಶ ಆಗಿ ಭೂ ಕುಸಿತ, ಮೇಘ ಸ್ಫೋಟ ಹೆಚ್ಚಾಗುತ್ತಿದೆ. ಪಶ್ಚಿಮ ಘಟ್ಟದಲ್ಲಿ ಬೃಹತ್‌ ಯೋಜನೆ ಕೈಗೊಳ್ಳುವುದನ್ನು ಸರಕಾರ ತಕ್ಷಣ ನಿಷೇಧಿಸಬೇಕು ಎಂದು
ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಒತ್ತಾಯಿಸಿದ್ದಾರೆ.

WhatsApp Image 2025 10 07 at 1.55.43 PM

ಪಶ್ಚಿಮ ಘಟ್ಟದಲ್ಲಿ ಮರ ಕತ್ತರಿಸುವ ಪ್ರಮುಖ ಯೋಜನೆಗಳು: (1) ಶರಾವತಿ ಪಂಪ್ಡ್ ಸ್ಟೋರೇಜ್ 16 ಸಾವಿರ ಮರಗಳು, 54.155 ಹೆಕ್ಟೇರ್ ಅರಣ್ಯ ಪ್ರದೇಶ (2) ಗೋವಾ-ತಮ್ನಾರ ಯೋಜನೆ 72 ಸಾವಿರ ಮರಗಳು 175 ಹೆಕ್ಟೇರ್ ಪ್ರದೇಶ (3) ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ 1.58 ಲಕ್ಷ ಮರಗಳು 585 ಹೆಕ್ಟೇರ್ ಅರಣ್ಯ ಪ್ರದೇಶ (4) ಕೇಣಿ ಖಾಸಗಿ ವಾಣಿಜ್ಯ ಬಂದರು 3172 ಮರಗಳು, 457 ಹೆ. ಸಮುದ್ರ ತೀರ ಪ್ರದೇಶ
(5) ಬೇಡ್ತಿ ವರದಾ ನದಿ ಯೋಜನೆ ಗುರುತು ಬಾಕಿ ಇದೆ 243 ಹೆಕ್ಟೇರ್ ಅರಣ್ಯ ಪ್ರದೇಶ… ಇಷ್ಟು ಯೋಜನೆಗಳಿಂದ ನೂರಾರು ಹೆಕ್ಟೇರ್‌ ಭೂ ಪ್ರದೇಶ, ಸಮುದ್ರ ತೀರ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಅಭಿವೃದ್ಧಿ ಹೆಸರು ತೋರಿಸಲಾಗುತ್ತಿದೆ.

ಇದನ್ನೂ ಓದಿ: ಉತ್ತರ ಕನ್ನಡ | ರಸ್ತೆ ಅಪಘಾತದಲ್ಲಿ ಈ ವರ್ಷ 179 ಜನರ ದುರ್ಮರಣ 

ಈ ನಿರಂತರ ಅರಣ್ಯ ನಾಶದಿಂದ ಭೂ ಕುಸಿತ, ಮೇಘ ಸ್ಫೋಟ, ಅಕಾಲಿಕ ಮಳೆಗಳಂತಹ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿದ್ದು, ಮಾನವ ಜೀವ ಮತ್ತು ಆಸ್ತಿ ಪಾಸ್ತಿಗಳಿಗೆ ಅಪಾರ ಹಾನಿ ಉಂಟಾಗುತ್ತಿದೆ. ಪಶ್ಚಿಮ ಘಟ್ಟದ ಅರಣ್ಯವು ಕೇವಲ ಸ್ಥಳೀಯ ಪರಿಸರದಷ್ಟೇ ಅಲ್ಲ, ರಾಜ್ಯದ ನೀರಿನ ಪೂರೈಕೆ, ವಿದ್ಯುತ್ ಉತ್ಪಾದನೆ ಹಾಗೂ ವಾಯುಮಂಡಲದ ಸಮತೋಲನಕ್ಕೂ ಜೀವಾಳವಾಗಿದೆ. ಆದ್ದರಿಂದ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅರಣ್ಯ ನಾಶವನ್ನು ತಕ್ಷಣ ನಿಲ್ಲಿಸಿ, ಶಾಶ್ವತ ಮತ್ತು ಪರಿಸರ ಸ್ನೇಹಿ ಪರ್ಯಾಯ ಮಾರ್ಗಗಳನ್ನು ಹುಡುಕುವುದು ಇಂದಿನ ಅವಶ್ಯಕತೆಯಾಗಿದೆ. ಸರ್ಕಾರ, ಪರಿಸರವಾದಿಗಳು ಹಾಗೂ ನಾಗರಿಕರು ಒಟ್ಟಾಗಿ ಕಾರ್ಯನಿರ್ವಹಿಸಿ ಪಶ್ಚಿಮ ಘಟ್ಟದ ಅಮೂಲ್ಯ ಅರಣ್ಯ ಸಂಪತ್ತನ್ನು ಮುಂದಿನ ಪೀಳಿಗೆಗಳಿಗೆ ಕಾಪಾಡಿ ಉಳಿಸುವುದು ಎಲ್ಲರ ನೈತಿಕ ಮತ್ತು ಸಾಮಾಜಿಕ ಕರ್ತವ್ಯವಾಗಿದೆ.

987638ca8c89079659d0147ec8165bb4e02be67aff4a7af8f502ae66e86a5a1e?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಸಂಸದ ರಾಘವೇಂದ್ರ, ವಿಜಯೇಂದ್ರ ಯಾವ ಕೋಟದಲ್ಲಿ ಹುದ್ದೆ ಪಡೆದಿದ್ದಾರೆ? ಆಯನೂರು ಮಂಜುನಾಥ ಪ್ರಶ್ನೆ

ಶಿವಮೊಗ್ಗ, ಸಂಸದ ರಾಘವೇಂದ್ರ ಮೊದಲ ಬಾರಿ ಯಾವ ಕೋಟದಲ್ಲಿ ಲೋಕಸಭಾ ಸದಸ್ಯರಾಗಿದ್ದಾರೆ,...

ಶಿವಮೊಗ್ಗ | ಅ. 9ರಿಂದ ವಿಮಾನ ನಿಲ್ದಾಣದ ಮುಖ್ಯದ್ವಾರದಲ್ಲಿ ಅನಿರ್ದಿಷ್ಟವಧಿ ಧರಣಿ

ಶಿವಮೊಗ್ಗ, ತಾಲೂಕಿನ ನಿಧಿಗೆ ಹೋಬಳಿ ಸೋಗಾನೆ ಗ್ರಾಮದ ವಿಮಾನ ನಿಲ್ದಾಣಕ್ಕೆ ಜಮೀನು...

ನಿಗಮ-ಮಂಡಳಿ-ಪ್ರಾಧಿಕಾರ ಅಧ್ಯಕ್ಷ ಸ್ಥಾನ | ಬೆಂಗಳೂರಿಗೆ 12, ಮಂಗಳೂರಿಗೆ 5, 11 ಜಿಲ್ಲೆಗೆ ಪ್ರಾತಿನಿಧ್ಯವೇ ಇಲ್ಲ!

ನಿಗಮ-ಮಂಡಳಿ-ಪ್ರಾಧಿಕಾರ ಅಧ್ಯಕ್ಷ ಸ್ಥಾನ ವಿಚಾರವಾಗಿ ಪಕ್ಷದ ಕಚೇರಿಗಿಂತಲೂ ನಾಯಕರ ಮನೆ ಸುತ್ತಿರುವ...

ಕೊರಟಗೆರೆ | ರಾಮಾಯಣ ಮಹಾಕಾವ್ಯ ಬೇರೆ ದೇಶದಲ್ಲಿಯೂ ಪ್ರಚಲಿತದಲ್ಲಿದೆ : ಗೋಪಿನಾಥ್

ನಿಸರ್ಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಹರ್ಷಿ ವಾಲ್ಮೀಕಿ ಅವರಲ್ಲಿ ಕವಿತ್ವ ಭಾವನೆ...

Download Eedina App Android / iOS

X