- ಹಾಸನ ಜಿಲ್ಲೆಯ ಆಲೂರು ಭಾಗದಿಂದ ವಲಸೆ ಬಂದಿರುವ ಕಾಡಾನೆ
- ಸೋಮಲಾಪುರ ಗ್ರಾಮದಲ್ಲಿ ಯುವತಿಯನ್ನು ಕೊಂದಿದ್ದ ಕಾಡಾನೆ
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೋಮಲಾಪುರದಲ್ಲಿ ಯುವತಿಯನ್ನು ತುಳಿದು ಸಾಯಿಸಿದ್ದ ಕಾಡಾನೆಯನ್ನು ಮಂಗಳವಾರ ಹೊನ್ನಾಳಿ ತಾಲೂಕಿನ ಜೀನಹಳ್ಳಿ ಬಳಿ ಸೆರೆ ಹಿಡಿಯಲಾಗಿದೆ.
ಹಾಸನ ಜಿಲ್ಲೆಯ ಆಲೂರು ಭಾಗದಿಂದ ವಲಸೆ ಬಂದಿದ್ದ ಕಾಡಾನೆ ಶನಿವಾರ ಚನ್ನಗಿರಿ ತಾಲೂಕಿನ ಹಲವು ಗ್ರಾಮಗಳಲ್ಲಿ ದಾಂಧಲೆ ನಡೆಸಿತ್ತು. ಸೋಮಲಾಪುರ ಗ್ರಾಮದಲ್ಲಿ ಮನೆ ಮುಂದೆ ಕೆಲಸ ಮಾಡುತ್ತಿದ್ದ ಕವನಾ ಎಂಬ ಯುವತಿಯನ್ನು ತುಳಿದು ಸಾಯಿಸಿತ್ತು. ಒಂಟಿ ಸಲಗದ ದಾಳಿಯಿಂದ ಇತರೆ ಮೂವರು ಗಾಯಗೊಂಡಿದ್ದರು.
ಸೋಮಲಾಪುರದಲ್ಲಿ ದಾಳಿ ನಂತರ ಕಾಡಾನೆಯು ಸೂಳೆಕೆರೆ ಇತರೆ ಭಾಗಕ್ಕೂ ನುಗ್ಗಿತ್ತು. ಶನಿವಾರ ಸಂಜೆ ವೇಳೆಗೆ ಬಸವಾಪಟ್ಟಣ ಸಮೀಪದ ಶೃಂಗಾರ್‌ಬಾಗ್ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು.
ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು. ವಿಶೇಷವಾಗಿ ಶಿವಮೊಗ್ಗದ ಸಕ್ರೆಬೈಲ್ ಆನೆ ಶಿಬಿರದಿಂದ ಸಾಗರ, ಬಲಭೀಮ ಹಾಗೂ ಬಹದ್ಧೂರ್ ಎಂಬ ಮೂರು ಸಾಕಾನೆಗಳನ್ನು ಕರೆ ತರಲಾಗಿತ್ತು. ಡ್ರೋನ್ ಕ್ಯಾಮೆರಾ ಬಳಸಿ ಸತತ ಕಾರ್ಯಾಚರಣೆ ನಂತರ ಜೀನಹಳ್ಳಿ ಬಳಿ ಪುಂಡಾನೆಯನ್ನು ಸೆರೆಹಿಡಿಯಲಾಗಿದೆ.
ಕಾಡಾನೆ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರಣ್ಯ ಸಿಬ್ಬಂದಿ ಮತ್ತು ಡಾರ್ಟ್ ತಜ್ಞರು ಜೀನಹಳ್ಳಿ ಬಳಿ ಆನೆ ಇರುವುದನ್ನ ಪತ್ತೆ ಹಚ್ಚಿದ್ದರು. ಡ್ರೋನ್ ಮೂಲಕ ಆನೆ ಇರುವಂತಹ ಜಾಗವನ್ನು ಸರಿಯಾಗಿ ಪತ್ತೆ ಮಾಡಲಾಗಿತ್ತು. ಸಕ್ರೆಬೈಲ್‌ನಿಂದ ಕಾರ್ಯಾಚರಣೆಗೆ ಆಗಮಿಸಿದ್ದ ಆನೆಗಳೊಂದಿಗೆ ಸ್ಥಳಕ್ಕೆ ತೆರಳಿದ್ದ ಸಿಬ್ಬಂದಿ ಆನೆಗೆ ಅರಿವಳಿಕೆ ಚುಚ್ಚು ಮದ್ದು ನೀಡಿ, ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನರಹಂತಕ ಕಾಡಾನೆ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ಆರಂಭ
ವೈದ್ಯಾಧಿಕಾರಿ ಮೇಲೆ ದಾಳಿ
ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಕ್ರೆಬೈಲು ಆನೆ ಶಿಬಿರದ ವೈದ್ಯಾಧಿಕಾರಿ ಡಾ. ವಿನಯ್ ಅವರ ಮೇಲೆ ಕಾಡಾನೆ ದಾಳಿ ನಡೆಸಿದೆ.
ಆನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದ ನಂತರ ಆನೆ ನೆಲಕ್ಕೆ ಉರಿಳಿತ್ತು. ಪರಿಶೀಲನೆಗಾಗಿ ವಿನಯ್ ಇತರರು ಸ್ಥಳಕ್ಕೆ ತೆರಳಿದಾಗ ಏಕಾಏಕಿ ಎದ್ದ ಆನೆ ನಿಂತಿದ್ದರಿಂದ ಗಾಬರಿಗೊಂಡ ಓಡುವಾಗ ಎಡವಿ ಬಿದ್ದ ಡಾ. ವಿನಯ್ ಮೇಲೆ ದಾಳಿ ನಡೆಸಿದ ಆನೆ ಸೊಂಟದ ಮೇಲೆ ಕಾಲಿಟ್ಟು ತುಳಿಯಲು ಯತ್ನಿಸಿತು.
ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಏರ್‌ಗನ್‌ನಿಂದ ಫೈರ್ ಮಾಡಿದ್ದಾರೆ. ಗಾಬರಿಗೊಂಡ ಆನೆ ಓಡಿ ಹೋಗಿದೆ. ಅದೃಷ್ಟವಶಾತ್ ಡಾ. ವಿನಯ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.