ಯಾದಗಿರಿ ಜಿಲ್ಲೆಯಲ್ಲಿ ರಾಜಾರೋ಼ಷವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಪದಾಧಿಕಾರಿಗಳು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಮನವಿ ಸಲ್ಲಿಸಿದರು.
ಯಾದಗಿರಿ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಹರ್ಷಲ್ ಬೋಯರ್ ಅವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸನ್ಮಾನಿಸಿದ ಮುಖಂಡರು ಅಕ್ರಮ ಮಧ್ಯ ಮಾರಾಟ ತಡೆಗೆ ಹಾಗೂ ಅಬಕಾರಿ ಇಲಾಖೆ ಸ್ಥಳಾಂತರಿಸಲು ಒತ್ತಾಯಿಸಿದರು.
ಜಿಲ್ಲಾದ್ಯಕ್ಷ ಶರಣು ಎಸ್.ನಾಟೇಕರ್ ಮಾತನಾಡಿ, ʼಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿ ಮಿತಿಮೀರಿದ್ದು, ಗ್ರಾಮೀಣ ಭಾಗದ ಕಿರಾಣಿ ಅಂಗಡಿ, ಹೋಟೆಲ್ ಸೇರಿದಂತೆ ಅನೇಕ ಕಡೆ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದ್ದು, ಬಡವರು, ಕೃಷಿ ಕೂಲಿಕಾರರು ವಿಶೇಷವಾಗಿ ಯುವ ಸಮೂಹ ಕುಡಿತದ ಚಟಕ್ಕೆ ಬಲಿಯಾಗಿ ಅಮೂಲ್ಯ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆʼ ಎಂದು ಕಳವಳ ವ್ಯಕ್ತಪಡಿಸಿದರು.
ಅಕ್ರಮ ಮದ್ಯ ಮಾರಾಟ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತೆ ಮೌನಕ್ಕೆ ಜಾರಿದ್ದಾರೆ. ಅಬಕಾರಿ ಇಲಾಖೆಯ ನಿರ್ಲಕ್ಷ್ಯದಿಂದ ಅಕ್ರಮ ದಂಧೆ ಎಗ್ಗಿಲದೆ ನಡೆಯುತ್ತಿರುವ ಬಗ್ಗೆ ಅನುಮಾನ ಬರುತ್ತಿದ್ದು, ಈ ಬಗ್ಗೆ ಗಮನಹರಿಸಬೇಕುʼ ಎಂದರು.
ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಭೀಮರಾಯ ಕಾಗಿ, ಖಂಡಪ್ಪ ಸಾಹುಕಾರ್, ಶರಣು ಸಿ.ಮಮ್ಮದರ್, ಗಿರೀಶ್ ಚಟ್ಟೇಕರ್, ಹಣಮಂತ ಕಚಕನೂರ್, ಪ್ರಭು ಕಚಕನೂರ್, ಮಲ್ಲಿಕಾರ್ಜುನ ನಾಟೇಕರ್, ಬಸವರಾಜ ಯಲಸತ್ತಿ, ಸಂಪತ್ ಗುಳೇದ್, ರಮೇಶ್ ವಿಭೂತಿ, ಕೃಷ್ಣ ಇನ್ನಿತರರು ಇದ್ದರು.