ದೀಕ್ಷಾ ಕನ್ಸಲ್ಟೆನ್ಸಿ ರಾಯಚೂರು ಏಜೆನ್ಸಿಯ ಮಾಲಿಕ ಮತ್ತು ಶಹಾಪೂರದ ಉಪ ಗುತ್ತಿಗೆದಾರ ವೇಂಕಟೇಶ ಯಕ್ಷಂತಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಮುಖಂಡರು ಪ್ರತಿಭಟನೆ ನಡೆಸಿದರು.
ಶಹಾಪೂರದ ನಗರದ ತಹಶೀಲ್ದಾರರ ಕಚೇರಿ ಎದುರು ದಸಂಸ (ಭೀಮವಾದ) ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಿ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕೃಷಿ ಸಂಶೋಧನಾ ಕೇಂದ್ರ ಭೀಮರಾಯನಗುಡಿಯ ಅಧಿಕಾರಿಗಳು 28 ಜನ ಕಾರ್ಮಿಕರನ್ನು ಕಾನೂನು ಬಾಹಿರವಾಗಿ ವಜಾಗೊಳಿಸಿದ್ದಾರೆ. ಇದು ಕಾರ್ಮಿಕ ವಿರೋಧಿ ನೀತಿಯಾಗಿದೆ. ವಜಾಗೊಂಡ ಕಾರ್ಮಿಕರನ್ನು ಮರು ನೇಮಕಾತಿ ಮಾಡಿಕೂಳ್ಳಬೇಕು ಎಂದು ಮನವಿ ಮಾಡಿದರು.
ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ದಸಂಸ ಮುಖಂಡ ಶರಣು ದೋರನಹಳ್ಳಿ ಹಾಗೂ ಶ್ರೀಶೈಲ ಹೊಸಮನಿ ಮಾತನಾಡಿ,
“ದೀಕ್ಷಾ ಕನ್ಸಲ್ಟೆನ್ಸಿ ರಾಯಚೂರು ಶಾಖೆಯು, ಶಹಾಪೂರ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿಗಳ ಆದೇಶದನ್ವಯ ಪ್ರತಿ ತಿಂಗಳು 5ನೇ ತಾರೀಕು ವೇತನ ಪಾವತಿ ಮಾಡಲಾಗುತ್ತಿಲ್ಲ. ಸರ್ಕಾರದ ಆದೇಶದನ್ವಯ ಮೀಸಲಾತಿಯನ್ನು ಅನುಸರಿಸದೇ ಕಾರ್ಯಾದೇಶದಲ್ಲಿನ ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸದೇ ಪ್ರತಿ ತಿಂಗಳು ಸಿಬ್ಬಂದಿಗಳ ಹೆಸರಿನಲ್ಲಿ ಸರ್ಕಾರಕ್ಕೆ ವಂಚಿಸಿ ಲಕ್ಷಾಂತರ ರೂಪಾಯಿ ಹಣವನ್ನು ಲೂಟಿ ಮಾಡುತ್ತಿದೆ. ಇವರು ಲೂಟಿ ಮಾಡಿದ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳಿಗೆ ಮರಳಿ ಭರಿಸುವಂತೆ ಕ್ರಮ ವಹಿಸಬೇಕು. ಹೊರ ಗುತ್ತಿಗೆ ಸಿಬ್ಬಂದಿಗಳ ಹೆಸರಿನಲ್ಲಿ ಲೂಟಿ ಮಾಡಿದ ಹಣವನ್ನು ತನಿಖೆ ಮಾಡಲು ಒಂದು ಉನ್ನತ ಮಟ್ಟದ ತನಿಖಾ ತಂಡವನ್ನು ನಿಯೋಜಿಸಬೇಕು” ಎಂದು ಆಗ್ರಹಿಸಿದರು.

“ಸರ್ಕಾರದ ಸುತ್ತೋಲೆಯನ್ವಯ ಮೀಸಲಾತಿ ನಿಯಮಗಳನ್ನು ಪಾಲಿಸಿಲ್ಲ. ಟೆಂಡರ್ ಕಾರ್ಯಾದೇಶದಲ್ಲಿರುವಂತೆ ಬಾಲಕಿಯರ ವಸತಿ ನಿಲಯಗಳಿಗೆ ಮಾತ್ರ ಕಾವಲುಗಾರರನ್ನು ನಿಯೋಜಿಸಲು ಅವಕಾಶವಿದೆ. ಆದರೆ ಕೆಲವು ಬಾಲಕರ ವಸತಿ ನಿಲಯಗಳಲ್ಲಿ ಅಡುಗೆ ಸಹಾಯಕರನ್ನು ನೇಮಿಸಿಕೊಂಡಿದ್ದಾರೆ. ಜೊತೆಗೆ ಕೆಲಸ ಮಾಡಿಸಿಕೊಂಡು ವೇತನ ನೀಡುವಲ್ಲಿ ಹಿಂದೇಟು ಹಾಕುತ್ತಿದೆ. ದಿನವೆಲ್ಲಾ ದುಡಿಸಿಕೊಂಡು, ರಾತ್ರಿ ಕಾವಲುಗಾರ ಎಂದು ಸುಳ್ಳು ದಾಖಲಿಸಿ ಅವರಿಗೆ ಕಡಿಮೆ ವೇತನ ಜಮಾ ಮಾಡಿ ವಂಚನೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಹೊರಗುತ್ತಿಗೆ ನೌಕರ ರಾಜು ಜಾಲಹಳ್ಳಿ ಮಾತನಾಡಿ, “ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸ್ವಾಧೀನಕ್ಕೆ ಸಂಬಂಧಿಸಿದ ಕೃಷಿ ಸಂಶೋಧನಾ ಕೇಂದ್ರ ಭೀಮರಾಯನಗುಡಿಯಲ್ಲಿ ಸುಮಾರು 10-20 ವರ್ಷಗಳಿಂದ ಗುತ್ತಿಗೆ ದಿನಗೂಲಿ ನೌಕರರಾಗಿ 28 ಜನರು ಕೆಲಸ ಮಾಡುತ್ತಿದ್ದಾರೆ. ಈ ನೌಕರರನ್ನು ಕಾನುನು ಬಾಹಿರವಾಗಿ ಕಾರ್ಮಿಕ ವಿರೋಧಿ ನೀತಿ ಅನುಸರಿಸಿ 28 ಜನ ಕಾರ್ಮಿಕರನ್ನು ಕೆಲಸದಿಂದ ತೆರವುಗೊಳಿಸಿರುತ್ತಾರೆ. ಜೀವನವೇ ಈ ಕೆಲಸದ ಮೇಲೆ ಅವಲಂಬಿತರಾಗಿರುವ ಈ ಕುಟುಂಬಗಳಿಗೆ ಈ ರೀತಿ ಅನ್ಯಾಯವೆಸಗಿರುವುದು ಸರಿಯಲ್ಲ. ಕಾರ್ಮಿಕರಿಗೆ ಸರ್ಕಾರ ನೂರಾರು ಕಾನೂನು ತಂದರೂ ಸಹ ದುಡಿಯುವ ಕೈಗಳಿಗೆ ನ್ಯಾಯ ಸಿಗುತ್ತಿಲ್ಲ. ಇವರನ್ನು ಈ ಕೂಡಲೇ ಮರು ನೇಮಕ ಮಾಡಿಕೊಂಡು 28 ಜನರ ಜೀವನಕ್ಕೆ ಅನೂಕೂಲ ಮಾಡಿಕೊಡಬೇಕೆಂದು” ಮನವಿ ಮಾಡಿದರು.
ಒಂದು ವಾರದೊಳಗಾಗಿ ಈ ಎರಡು ಸಮಸ್ಯೆ ಕುರಿತು ಕ್ರಮ ವಹಿಸದಿದ್ದಲ್ಲಿ ಹೊರ ಗುತ್ತಿಗೆ ಸಿಬ್ಬಂದಿಗಳೊಂದಿಗೆ ನಿರಂತರ ಉಪವಾಸ ಧರಣಿ ಹಮ್ಮಿಕೊಳುತ್ತೇವೆಂದು ಎಚ್ಚರಿಕೆ ನೀಡುವುದರ ಮೂಲಕ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಯಾದಗಿರಿ | ಸತ್ಯ, ನ್ಯಾಯದ ಪರ ನಿಲ್ಲುವುದೇ ನಿಜವಾದ ಧರ್ಮ
ಮನವಿ ಸ್ವೀಕರಿಸಿ ತಾಲೂಕು ತಹಶೀಲ್ದಾರ ಸಿದ್ದಾರೂಢ ಮಾತನಾಡಿ, “ಸರಕಾರಿ ನೌಕರರಾಗಿರಲಿ, ಹೊರಗುತ್ತಿಗೆ ನೌಕರರಾಗಿರಲಿ ಅವರಿಗೆ ಇಎಸ್‌ಐ, ಇಪಿಎಫ್ ನೀಡುವುದು ಕಡ್ಡಾಯವಾಗಿದೆ. ದೀಕ್ಷಾ ಏಜೆನ್ಸಿಗಳ ಮೇಲೆ ಇರುವ ಆರೋಪ ಮತ್ತು ಕೃಷಿ ಸಂಶೋಧನಾ ಕೇಂದ್ರದ 28 ಜನ ಗುತ್ತಿಗೆ ದಿನಗೂಲಿ ನೌಕರರನ್ನು ಏಕಾಏಕಿ ಕೆಲಸದಿಂದ ವಜಾ ಗೋಳಿಸಿರುವ ಕುರಿತು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಹದಿನೈದು ದಿನಗಳ ಒಳಗಾಗಿ ಕ್ರಮ ಕೈಗೊಳ್ಳಲಾಗುವುದೆಂದು” ತಿಳಿಸಿದರು.
ಈ ಸಂದರ್ಭದಲ್ಲಿ ಕದಸಂಸ ಭೀಮವಾದ ರಾಜ್ಯ ಸಮಿತಿ ಸದಸ್ಯ ಶಿವು ಪೋತೆ, ದಸಂಸ ಜಿಲ್ಲಾಧ್ಯಕ್ಷ ವಿಶ್ವ ನಾಟೇಕರ್, ತಾಲೂಕು ಸಂಚಾಲಕ ಶೇಖರ್ ಬಡಿಗೇರ, ಸಂತೋಷ ಗೋಗಿ, ಸುನೀಲ್ ಗೋಗಿ, ಮಲ್ಲಿಕಾರ್ಜುನ ಬಡಿಗೇರ, ವಿಶ್ವ ಪರಸಪೂರ್, ಮಲ್ಲಿಕಾರ್ಜುನ ಮೈಕೆ, ಸಾಬಣ್ಣ ಹೊಯಾಳ, ಜೈಭೀಮ ಯಮನೂರ್, ವಿಶ್ವ ಹಲಭಾವಿ, ಪರಶುರಾಮ ಐಯಾಳ, ಮಾಳಪ್ಪ ಹಲಭಾವಿ, ಮರಲಿಂಗ ಸಾವೂರ್, ದೇವರಾಜ್, ರಾಜು ದೇವಿಕೇರಿ ಹೊರಗುತ್ತಿಗೆ ನೌಕರರಾದ ರಾಜು ಜಲಹಳ್ಳಿ, ಬಸವರಾಜ ದಿಗ್ಗಿ, ಸಂತೋಷ ಪವಾರ್, ವಿನೋದ, ಬಸವರಾಜ್ ಗೋಗಿ, ಭೀಮರಾಯ, ರಾಜುಗೌಡ, ಮಾನಿಬಾಯಿ, ಲಲಿತಾ, ಬಸಮ್ಮ, ನಿಲಮ್ಮ, ಲಕ್ಷ್ಮಿಬಾಯಿ, ಉಮಾ, ಅಯ್ಯಮ್ಮ, ಉಮಾ ಇದ್ದರು.