ಗುರುಮಠಕಲ್ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ಮುಂಗಾರು ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿನ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದ ವತಿಯಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸಿಹಿನೀರು ಬಾವಿಯಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಬಳಿಕ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ, ‘ಗುರುಮಠಕಲ್ ಗಡಿಭಾಗದ ತಾಲೂಕಾಗಿದ್ದು, ಇಲ್ಲಿನ ಬಹುತೇಕ ರೈತರು ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿದ್ದಾರೆ. ಆದರೆ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ತೊಗರಿ, ಹತ್ತಿ, ಶೇಂಗಾ, ಹೆಸರು ಹಾಗೂ ಉದ್ದು ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಹೇಳಿದರು.
‘ಬ್ಯಾಂಕ್‌ಗಳು ಹಾಗೂ ಖಾಸಗಿ ಮೂಲಗಳಿಂದ ಸಾಲ ಪಡೆದು ಬಿತ್ತನೆ ಮಾಡಿದ ರೈತರು ಮಳೆ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದ್ದರಿಂದ ಸರ್ಕಾರ ಯಾವುದೇ ವರದಿಗಾಗಿ ಕಾಯದೆ ತಕ್ಷಣ ಮಧ್ಯಂತರ ಬರ ಪರಿಹಾರ ಘೋಷಿಸಿ, ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ₹20 ಲಕ್ಷ ಪರಿಹಾರ ಘೋಷಿಸಬೇಕು’ ಎಂದು ಒತ್ತಾಯಿಸಿದರು.
‘ಮಳೆ ಕೊರತೆಯಿಂದ ಜಲಾಶಯಗಳು, ಕೆರೆ-ಕಟ್ಟೆಗಳು ಬತ್ತುತ್ತಿದ್ದು, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆಯೂ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಿ, ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಮೂಲಕ ಸಂಕಷ್ಟ ನಿವಾರಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹಿಸಿ ರಸ್ತೆ ತಡೆ; ಸರ್ಕಾರದ ವಿರುದ್ಧ ರೈತರ ಆಕ್ರೋಶ
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಕಾಕಲವಾರ, ನರಸಿಂಹಲು ಗಂಗನೋಳ, ರಾಮುಲು ಕೊಡಗಂಟಿ, ಕಾಶಪ್ಪ ಮನ್ನೆ, ರಾಜು ಪುರುಷೋತ್ತಮ, ಮಲ್ಲಿಕಾರ್ಜುನ ಚೆಪೆಟ್ಲಾ, ಅಯಾಝ್ ಅಲಿ, ರವಿಕುಮಾರ್ ವಾರದ, ಸಿದ್ದಪ್ಪ ಮದ್ದೂರು, ಮಲ್ಲಿಕಾರ್ಜುನ ಗಣಪುರ, ಭೀಮಪ್ಪ ಸಿದ್ದಾಪುರ, ಶ್ರೀನಿವಾಸ ಪಟೇಲ್, ಸಾಬಣ್ಣ, ಮಲ್ಲರೆಡ್ಡಿ ಅಮ್ಮಪಲ್ಲಿ, ವೀರೇಶ್ ಪಸ್ಪುಲ್, ವಿಜಯಕುಮಾರ್ ಕೊಂಕಲ, ಹುಸೇನ್ ಚಂಡರಕಿ, ನಾಗೇಶ್ ಮಡೆಪಲ್ಲಿ, ದೇವು ಪರಮೇಶ್‌ಪಲ್ಲಿ, ಬಾಬು ದೊರೆ ತಾತಳಗೇರಾ, ಚಾಂದ್ ಕಾಕಲವಾರ, ಬನ್ನಪ್ಪ ಚಿಂತನಹಳ್ಳಿ, ಹನುಮೇಶ, ಶರಣಪ್ಪ, ಜಗಪ್ಪ, ಆನಂದ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.





