ಮಳೆ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿ, ಸಾಲದ ಒತ್ತಡಕ್ಕೆ ಸಿಲುಕಿದ್ದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಡಿಗೇರಾ ತಾಲೂಕಿನ ಕಾಂಡಂಗೇರಾ ಗ್ರಾಮದಲ್ಲಿ ನಡೆದಿದೆ.
ಮಲ್ಲಪ್ಪ ಆಲೂರು (41) ಮೃತ ರೈತ. ಸುಮಾರು 50 ಎಕರೆಗೂ ಅಧಿಕ ಜಮೀನನ್ನು ಲೀಸ್‌ಗೆ ಪಡೆದು ಕೃಷಿ ಮಾಡುತ್ತಿದ್ದ ಮಲ್ಲಪ್ಪ, ಬೆಳೆ ಬೆಳೆಯಲು ಬ್ಯಾಂಕ್‌ನಿಂದ ಸುಮಾರು ₹4 ಲಕ್ಷ ಸಾಲ ಪಡೆದಿದ್ದರು. ಇದರ ಜೊತೆಗೆ ಸುಮಾರು ₹15 ಲಕ್ಷದಷ್ಟು ಕೈಗಡ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಬೆಳೆಗಳು ಒಣಗಿ ಹೋಗಿವೆ. ಕೃಷಿಗಾಗಿ ಮಾಡಿದ್ದ ಸಾಲದ ಮೊತ್ತ ಒಂದೆಡೆಯಾದರೆ, ಕೈಗೆ ಬಂದ ಬೆಳೆ ನಷ್ಟವಾಗಿರುವುದು ಮತ್ತೊಂದೆಡೆ ರೈತನನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿತ್ತು.
ಬೆಳೆ ನಷ್ಟದಿಂದ ಸಾಲ ಮರುಪಾವತಿ ಮಾಡುವುದು ಹೇಗೆ ಎಂಬ ಚಿಂತೆ ಹಾಗೂ ಸಾಲಗಾರರ ಒತ್ತಡದಿಂದ ಮಲ್ಲಪ್ಪ ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ದುಡುಕಿನ ನಿರ್ಧಾರ ಕೈಗೊಂಡು ಜೀವ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿದ್ದೀರಾ? ಬೀದರ್ | ಸೆ.9ರಿಂದ ಕೆಕೆಆರ್‌ಡಿಬಿ ಕಚೇರಿ ಎದುರು ಖಾಸಗಿ ಶಿಕ್ಷಣ ಸಂಸ್ಥೆಗಳ ಧರಣಿ
ಘಟನೆ ಗ್ರಾಮದಲ್ಲಿ ಆತಂಕ ಹಾಗೂ ದುಃಖದ ವಾತಾವರಣಕ್ಕೆ ಕಾರಣವಾಗಿದೆ. ರೈತರ ಮೇಲೆ ಹೆಚ್ಚುತ್ತಿರುವ ಸಾಲದ ಹೊರೆ ಮತ್ತು ಮಳೆ ಕೊರತೆಯಿಂದ ಉಂಟಾಗುತ್ತಿರುವ ಬೆಳೆ ನಷ್ಟದ ಬಗ್ಗೆ ಸರ್ಕಾರ ತಕ್ಷಣ ಗಮನಹರಿಸಿ ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ನೆರವು ಹಾಗೂ ಪರಿಹಾರ ಒದಗಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.





