ಕಲ್ಯಾಣ ಕರ್ನಾಟಕದ ಭಾಗದಲ್ಲಿ ಬಸವಾದಿ ಶರಣರ ತತ್ವ ಪ್ರಸಾರಗೈದವರಲ್ಲಿ ಲಿಂಗಣ್ಣ ಸತ್ಯಂಪೇಟೆ ಅವರ ಕೊಡುಗೆ ಅಪಾರವಾಗಿದೆ ಎಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಸಿದ್ಧಲಿಂಗಣ್ಣ ಆನೇಗುಂದಿ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ವಿಚಾರ ವೇದಿಕೆ ಸಹಯೋಗದಲ್ಲಿ ಶಹಾಪುರ ನಗರದ ಚರಬಸವೇಶ್ವರ ಪದವಿ ಪೂರ್ವ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ ʼಲಿಂಗಣ್ಣ ಸತ್ಯಂಪೇಟೆ ಅವರ ಬದುಕು-ಬರಹ, ಹೋರಾಟ, ಪತ್ರಿಕೋದ್ಯಮʼ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼಲಿಂಗಣ್ಣ ಸತ್ಯಂಪೇಟೆ ಅವರು ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಪತ್ರಿಕಾ ರಂಗ, ಶರಣ ಚಿಂತನೆ ಹಾಗೂ ಜನಮುಖಿ ಚಳವಳಿಯಲ್ಲಿ ಸಕ್ರಿಯರಾಗಿ ಸಮಾಜ ಬದಲಾವಣೆಗಾಗಿ ಶ್ರಮಿಸಿದವರು. ಇಂದಿನ ಯುವ ಸಮೂಹ ಇಂತಹ ಸಾಧಕರ ಆದರ್ಶಗಳು ಮೈಗೂಡಿಸಿಕೊಳ್ಳಬೇಕುʼ ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ಧರಾಮ ಹೊನ್ಕಲ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾರ್ಯ ಚಟುವಟಿಕೆಗಳು ಕುರಿತು ಹಾಗೂ ಲಿಂಗಣ್ಣ ಸತ್ಯಂಪೇಟೆ ಅವರ ಶರಣ ತತ್ವ ಪ್ರಸಾರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಾಹಿತಿ ಶಿವಣ್ಣ ಇಜೇರಿ ಅವರು ಲೇಖಕ ಲಿಂಗಣ್ಣ ಸತ್ಯಂಪೇಟೆ ಅವರೊಂದಿಗಿನ ಒಡನಾಟ ಹಾಗೂ ಅವರ ಜೀವನ ಕಥನ, ಹೋರಾಟ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಧರ್ಮಣ್ಣಗೌಡ ಬಿರಾದಾರ ಮಾತನಾಡಿ, ʼಲಿಂಗಣ್ಣ ಸತ್ಯಂಪೇಟೆ ಅವರ ಕುಟುಂಬದೊಂದಿಗೆ ಇರುವ ಒಡನಾಟ ಕುರಿತು ವಿವರಿಸಿದರು. ಸಾಹಿತ್ಯ ಅಕಾಡೆಮಿ ಲೇಖಕ ಲಿಂಗಣ್ಣ ಸತ್ಯಂಪೇಟೆ ಅವರನ್ನು ಸ್ಮರಿಸುವ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯʼ ಎಂದರು.
ಇದನ್ನೂ ಓದಿ : ಬೀದರ್ | ಲೇಖಕರು ಸೃಜನಶೀಲ ಸಾಹಿತ್ಯ ರಚನೆಗೆ ಮುಂದಾಗಲಿ : ಗುರುಬಸವ ಪಟ್ಟದ್ದೇವರು
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ವಿಶ್ವಾರಾಧ್ಯ ಸತ್ಯಂಪೇಟೆ, ಉಪನ್ಯಾಸಕಿ ನಿರ್ಮಲ ತುಂಬಗಿ ಸೇರಿದಂತೆ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತಿತರರು ಪಾಲ್ಗೊಂಡಿದ್ದರು.