ಕರ್ನಾಟಕ ಪ್ರಾಂತ ರೈತ ಸಂಘದ ಹಿರಿಯ ಮುಖಂಡರಾದ ಚನ್ನಪ್ಪ ಆನೆಗುಂದಿ, ಯಲ್ಲಪ್ಪ ನಾಯ್ಕೋಡಿ ಹಾಗೂ ಯಂಕಮ್ಮ ಅವರ ಮೇಲೆ ದಾಖಲಿಸಿರುವ ಸುಳ್ಳು ಅಟ್ರಾಸಿಟಿ ಪ್ರಕರಣ ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಿಸಿ ಜಿಲ್ಲಾ ಸಾಮೂಹಿಕ ಸಂಘಟನೆಗಳ ವೇದಿಕೆ ವತಿಯಿಂದ ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಹಳೆ ಜಿಲ್ಲಾ ಪಂಚಾಯತ್ ಕಚೇರಿಯಿಂದ ಡಿಸಿಆರ್‌ಇ ಪೊಲೀಸ್ ಠಾಣೆವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಯಾದಗಿರ ಪೊಲೀಸ್ ಸರ್ಕಲ್ ಇನ್ಸ್‌ಪೇಕ್ಟರ್ ಡಿಸಿಆರ್‌ಇ ಅವರ ಮುಖಾಂತರ ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ʼರೈತ ಮುಖಂಡ ಚನ್ನಪ್ಪ ಆನೇಗುಂದಿ, ಯಲ್ಲಪ್ಪ ನಾಯ್ಕೋಡಿ ಮತ್ತು ಯಂಕಮ್ಮ ಮೇಲೆ ದೌರ್ಜನ್ಯ ನಡೆಸಿ, ಕೊಲೆ ಬೆದರಿಕೆ ಹಾಕಿದಕ್ಕೆ ದೂರು ದಾಖಲಿಸಿದ ಹಿನ್ನೆಲೆ ಹೋರಾಟಗಾರರ ಮೇಲೆ ಸುಳ್ಳು ಅಟ್ರಾಸಿಟಿ ಪ್ರತಿದೂರು ದಾಖಲಿಸಿದ್ದು ಖಂಡನೀಯ. ಸುಳ್ಳು ಅಟ್ರಾಸಿಟಿ ದಾಖಲಿಸಿದ ನಾಗಪ್ಪ ಕಾಶಿರಾಜ ಮತ್ತು ದೇವರಾಜ ಸುಭಾಸ ಅವರನ್ನು ಬಂಧಿಸಬೇಕು. ಗೋಗಿ ಠಾಣೆಯ ಪಿಎಸ್‌ಐ ದೇವೀಂದ್ರ ರೆಡ್ಡಿ ಅವರು ಸತ್ಯತೆಯನ್ನು ಪರಿಶೀಲನೆ ಮಾಡದೇ ಕೇಸ್ ದಾಲಿಸಿದ್ದು ತೀವ್ರವಾಗಿ ಖಂಡಿಸುತ್ತೇವೆʼ ಎಂದರು.

‘ಮುಖಂಡರಾದ ಚನ್ನಪ್ಪ ಆನೇಗುಂದಿ ಅವರು ಕಳೆದ ನಾಲ್ಕು ದಶಕಗಳಿಂದ ಶೋಷಿತರ, ಬಡವರ, ರೈತರ, ಕೃಷಿ ಕೂಲಿಕಾರರ, ಮಹಿಳೆಯರ, ವಿದ್ಯಾರ್ಥಿಗಳ, ದಲಿತರ ಸಮಸ್ಯೆಗಳಿಗೆ ಸ್ಪಂದಿಸಿ ಅನೇಕ ಹೋರಾಟಗಳನ್ನು ರೂಪಿಸಿದ್ದಾರೆ. ಯಾವುದೇ ಜಾತಿ ತಾರತಮ್ಯ ಇಲ್ಲದೆ ಚಳವಳಿಯಲ್ಲಿದ್ದಾರೆ. ಹೋರಾಟಗಾರರನ್ನು ಹತ್ತಿಕ್ಕುವ ಷಡ್ಯಂತ್ರ ನಡೆಸದೆ ಕೂಡಲೇ ಪ್ರಕರಣ ಹಿಂಪಡೆದು, ಅವರಿಗೆ ಕೊಲೆ ಬೆದರಿಕೆ ಹಾಕಿರುವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕುʼ ಎಂದು ಆಗ್ರಹಿಸಿದರು.
‘ರೈತಪರ ಹೋರಾಟಗಾರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಕಾಯ್ದೆ ದುರುಪಯೋಗ ಪಡಿಸಿಕೊಂಡಿರುವ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು. ಸುಳ್ಳು ಅಟ್ರಾಸಿಟಿ ಕೇಸ್ ದಾಖಲೆ ಮಾಡಿರುವ ಗೋಗಿ ಪಿಎಸ್‌ಐ ದೇವಿಂದ್ರರೆಡ್ಡಿ ಮೇಲೆ ಸೂಕ್ತ ಕ್ರಮ ಜರುಗಿಸಬೇಕುʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ ಜಿಲ್ಲೆಯ ಅತಿವೃಷ್ಟಿ ಪರಿಹಾರಕ್ಕೆ ಸಿಎಂ ₹50 ಕೋಟಿ ಅನುದಾನ ನೀಡಿದ್ದಾರೆ : ಸಚಿವ ರಹೀಂ ಖಾನ್
ಸಂಘಟನೆಯ ಪ್ರಮುಖರಾದ ದಾವಲಸಾಬ್ ನದಾಫ್, ಶರಣು ಮಂದರವಾಡ, ಗುಂಡಪ್ಪ ಕಲಬುರ್ಗಿ, ಎಸ್.ಎಂ.ಸಾಗರ್, ಭೀಮರಾಯ ಪೂಜಾರಿ, ಶಾಂತಪ್ಪ ಶಾಲಿಮನಿ, ಶರಣಬಸು ಹೀರೆಮಠ, ಧರ್ಮಣ್ಣ ದೊರೆ, ಅಶೋಕ ಕಲಾಲ್, ರಾಮಯ್ಯ ಆಲ್ದಾಳ್, ನರಸಣ್ಣ ನಾಯ್ಕ, ಯಶ್ವಂತ್ ಟಿ, ವಿರೇಶ ಸಜ್ಜನ್, ಪ್ರದೀಪ ಕುಮಾರ್, ರಂಗಮ್ಮ ಕಟ್ಟಿಮನಿ, ಚಾಂದಪಾಶಾ ತಡಿಬಿಡಿ, ದೇವಿಂದ್ರಪ್ಪ ಗೌಡ ಪೊಲೀಸ್ ಪಾಟೀಲ್, ಫಕೀರಪ್ಪ ಅಹ್ಮದ್, ಮಲ್ಲಣ್ಣ ಹುಬ್ಬಳ್ಳಿ, ಶಾಹಜಾಜಿ ಬೇಗಂ, ಸೌಭಾಗ್ಯ ಮಾಲಗತ್ತಿ, ಮಹಾಲಿಂಗಪ್ಪ ಮಾಲಗತ್ತಿ, ಭೀಮರಾಯ, ಮಲ್ಲಣ್ಣ ವಡಗೇರಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.