ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೊಂಗಂಡಿ ಗ್ರಾಮದ ಸೀಮಾಂತರದಲ್ಲಿ ಬರುವ ಸರ್ವೇ ನಂ:12/6-03 ಗುಂಟೆ ಜಮೀನಿನಲ್ಲಿರುವ ಎಸ್‌ಟಿ/ಎಸ್‌ಸಿ ಜನಾಂಗಕ್ಕೆ ಸೇರಿದ ಸರ್ಕಾರಿ ಬಾವಿಯನ್ನು ಜೆಸಿಬಿಯಿಂದ ಬಾವಿ ಮುಚ್ಚಿಸಿರುವ ಸವರ್ಣೀಯರು ಜಾಗ ನಮ್ಮದೆಂದು ದೌರ್ಜನ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತಾಲೂಕಿನ ಗೋನಾಲ ಪಂಚಾಯಿತಿ ವ್ಯಾಪ್ತಿಯ ಕೊಂಗಂಡಿ ಗ್ರಾಮದ ತಿಮ್ಮಣ್ಣ ಮತ್ತು ಮರಲಿಂಗ ಎಂಬುವವರು ಒಗ್ಗೂಡಿ ಎಸ್‌ಸಿ/ಎಸ್‌ಟಿ ಸಮುದಾಯದ ಕುಡಿಯುವ ನೀರಿನ ಬಾವಿ ಮುಚ್ಚಿಸಿದ ಹಿನ್ನೆಲೆ ಶೋಷಿತ ಸಮುದಾಯ ನಿಂಗಪ್ಪ ಚಂದ್ರಪ್ಪ, ಲಚಮಣ್ಣ ಎಂಬುವವರು ಕುಡಿಯುವ ನೀರಿನ ಬಾವಿ ಮುಚ್ಚಿಸಿದ್ದನ್ನು ಪ್ರಶ್ನಿಸಿದ್ದಾರೆ. ಬಳಿಕ ಸವರ್ಣಿಯರಾದ ತಿಮ್ಮಣ್ಣ ಮತ್ತು ಮರಲಿಂಗ ಎಂಬವವರು ಕೂಡಿಕೊಂಡು ʼಈ ಬಾವಿ ನನ್ನ ಜಮೀನಿನಲ್ಲಿ ಬರುತ್ತದೆಂದು ಹೇಳಿ ನಮ್ಮ ಮೇಲೆ ದೌರ್ಜನ್ಯದಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಮಾತನಾಡಿದ್ದು, ಜಾತಿ ನಿಂದನೆ ಮಾಡಿದ್ದಾರೆʼ ಎಂದು ಸ್ಥಳೀಯ ಸಂತ್ರಸ್ತರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆಯ ಮತ ಎಣಿಕೆ: ಸ್ಥಳೀಯರಲ್ಲಿ ಕುತೂಹಲ
“ಸರ್ಕಾರಿ ಬಾವಿಯನ್ನು ಒತ್ತುವರಿ ಮಾಡಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಿರುವ ತಿಮ್ಮಣ್ಣ ಮತ್ತು ಮರಲಿಂಗ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನಮಗೆ ಸಾರ್ವಜನಿಕ ಬಾವಿಯನ್ನು ಮರಳಿಸುವ ಮೂಲಕ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಬೇಕು” ಎಂದು ಆಗ್ರಹಿಸಿ ಯಾದಗಿರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.