ಸಮಾಜದ ಕಟ್ಟ ಕಡೆಯ ಸಮುದಾಯವಾದ ಕೊರಗರಿಗೆ ಕಳಪೆ, ಕಲಬೆರಕೆಯ ಆಹಾರ ಪೂರೈಕೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರು ಸಹ ನೀಡಿದ್ದೇವೆ. ಒಬ್ಬ ನಮ್ಮ ಜನಪ್ರತಿನಿಧಿಯಾಗಿ ಮನುಷ್ಯರ ಆಹಾರದ ಬಗ್ಗೆ ಧ್ವನಿ ಎತ್ತದ ತಾವು ಪ್ರಾಣಿಗಳ ಮೇವಿನ ಬಗ್ಗೆ ಅತೀವ ಕಾಳಜಿವಹಿಸುವುದು ದುರಂತವೇ ಸರಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿಯವರು ಉಡುಪಿ ಶಾಸಲ ಯಶ್ಫಾಲ್ ಸುವರ್ಣರವರಿಗೆ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರ, ಅಪೌಷ್ಟಿಕತೆಯಿಂದ ಇಡೀ ಕೊರಗ ಜನಾಂಗವೇ ನಶಿಸುತ್ತಿರುವ ಈ ಸಂದರ್ಭದಲ್ಲಿ ಒಂದು ಪ್ರಾಣಿಯ ಬಗ್ಗೆ ಸಚಿವರಿಗೆ ಪತ್ರ ಬರೆದಿರುವ ಯಶಪಾಲ್ ಸುವರ್ಣರ ಬಗ್ಗೆ ಸೋಜಿಗವೆನಿಸುತ್ತದೆ. ಅದೂ ಅಲ್ಲದೇ ಇಲ್ಲೇ ಪಕ್ಕದ ಬಾರಕೂರು ಹನೆಹಳ್ಳಿಯ ಸೆಂಟ್ರಿಂಗ್ ಕೆಲಸ ಮಾಡುವ ಕ್ರಷ್ಣ ಎಂಬ ದಲಿತ ಯುವಕನನ್ನು ಯಾರೋ ಅಪರಿಚಿತರು ಶೂಟೌಟ್ ಮಾಡಿದಾಗ ಧ್ವನಿ ಎತ್ತದ ತಾವು (ಆರೋಪಿಗಳು ಇಂದಿಗೂ ಪತ್ತೆಯಾಗಿಲ್ಲ), ಅತೀ ಹೆಚ್ಚು ದನದ ಮಾಂಸವನ್ನು ರಫ್ತು ಮಾಡುವ ದೇಶಗಳಲ್ಲಿಭಾರತ ದೇಶವು ಪ್ರಪಂಚದಲ್ಲೇ ಎರಡನೇ ಸ್ಥಾನದಲ್ಲಿದೆ. ಇದರ ಕನಿಷ್ಠ ಜ್ಞಾನವೂ ತಮಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ದನ ಎನ್ನುವ ಪ್ರಾಣಿಯು ತಮಗೆ ಗೋಮಾತೆಯಾದರೆ ದಯವಿಟ್ಟು ಅದನ್ನು ಮನೆಯಲ್ಲಿ ಕಟ್ಟಿಕೊಂಡು ಪೂಜಿಸಿ ನಮ್ಮದೇನೂ ಅಭ್ಯಂತರವಿಲ್ಲ ಆದರೆ ದೇಶಾದ್ಯಂತ ಇರುವ ದನದ ಮಾಂಸದವನ್ನು ರಫ್ತು ಮಾಡುವ ಕಾರ್ಖಾನೆಯನ್ನು ಮುಚ್ಚಿಸುವ ಬಗ್ಗೆ ಮಾತನಾಡದೇ, ಬರೀ ಇಲ್ಲಿ ಮಾತ್ರ ಗೋವಿನ ಹೆಸರಿನಲ್ಲಿ ಕೆಳವರ್ಗದ ಹುಡುಗರನ್ನು, ದಲಿತರನ್ನು ಎತ್ತಿಕಟ್ಟಿ, ಅವರ ಮೇಲೆ ಕೇಸು ಬೀಳಿಸಿ, ಜೈಲಿಗಟ್ಟಿ ತಮ್ಮ ರಾಜಕೀಯ ಬೇಳೆಯನ್ನು ದಯವಿಟ್ಟು ಬೇಯಿಸಿಕೊಳ್ಳಬೇಡಿ ಎಂದು ವಿನಂತಿಸಿದ್ದಾರೆ.