ಯಲ್ಲಾಪುರ: ವನ್ಯಜೀವಿ ಉತ್ಪನ್ನಗಳ ಅಕ್ರಮ ಬೇಟೆ, ಸಂಗ್ರಹ ಮತ್ತು ಸಾಗಾಟದ ವಿರುದ್ಧ ಅರಣ್ಯ ಸಂಚಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ವನ್ಯಜೀವಿ ಅಂಗಾಂಗಗಳು ಪತ್ತೆಯಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ತಾಲ್ಲೂಕಿನ ಉಪ್ಪಳೇಶ್ವರ ಗ್ರಾಮದಲ್ಲಿ ಶಿರಸಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದರು. ಈ ವೇಳೆ ವನ್ಯಜೀವಿ ಉತ್ಪನ್ನಗಳನ್ನು ಅಕ್ರಮವಾಗಿ ಹೊಂದಿದ್ದ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಕಾರ್ಯಾಚರಣೆಯಲ್ಲಿ 15.748 ಕೆ.ಜಿ. ಪ್ಯಾಂಗೋಲಿನ್ ಚಿಪ್ಪುಗಳು, ಎರಡು ಭಾರತೀಯ ಕಾಡೆಮ್ಮೆ (ಗೌರ್) ಕೊಂಬುಗಳು, ಎಂಟು ಹುಲಿ ಉಗುರುಗಳು, 12 ಚಿರತೆ ಉಗುರುಗಳು, ಎರಡು ಹುಲಿ ಹಲ್ಲುಗಳು, ಮೂರು ಚಿರತೆ ಹಲ್ಲುಗಳು ಹಾಗೂ ಆರು ಕಾಡುಹಂದಿ ಹಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಒಂದು ಬೈಕ್ ಮತ್ತು ಒಂದು ಸ್ಕೂಟರ್‌ನ್ನೂ ಜಪ್ತಿ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಪಿಓಪಿ ಮೂರ್ತಿ, ಡಿಜೆ ಬಳಕೆ ನಿಷೇಧ
ವಶಪಡಿಸಿಕೊಂಡ ಎಲ್ಲ ವನ್ಯಜೀವಿ ಉತ್ಪನ್ನಗಳನ್ನು ನಿಯಮಾನುಸಾರ ಅರಣ್ಯ ಇಲಾಖೆಯ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಪತ್ತೆಯಾದ ವನ್ಯಜೀವಿ ಉತ್ಪನ್ನಗಳು ಯಾವ ಪ್ರದೇಶದಿಂದ ಬಂದಿವೆ, ಅವುಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಮತ್ತು ಈ ವ್ಯವಹಾರದ ಹಿಂದೆ ಮತ್ತಷ್ಟು ವ್ಯಕ್ತಿಗಳು ಇದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಇನ್ನೂ ಕೆಲವರು ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಈ ಪ್ರಕರಣವು ಸ್ಥಳೀಯ ಮಟ್ಟದ ಅಕ್ರಮ ಸಾಗಾಟಕ್ಕೆ ಸೀಮಿತವಾಗಿದೆಯೇ ಅಥವಾ ಇದರ ಹಿಂದೆ ದೊಡ್ಡ ಪ್ರಮಾಣದ ವನ್ಯಜೀವಿ ಕಳ್ಳಸಾಗಣೆ ಜಾಲವಿದೆಯೇ ಎಂಬುದನ್ನು ತನಿಖೆಯ ಮುಂದಿನ ಹಂತದಲ್ಲಿ ತಿಳಿದು ಬರಬೇಕಾಗಿದೆ.
APCCF ಹಾಗೂ IFS ಅಧಿಕಾರಿ ಮನೋಜ್ ತ್ರಿಪಾಠಿ ಮತ್ತು ಅಪರಾಧ ನಿಯಂತ್ರಣ ಘಟಕದ (ವಿಜಿಲೆನ್ಸ್) DCF ಹಾಗೂ IFS ಅಧಿಕಾರಿ ಸಂದೀಪ್ ಸೂರ್ಯವಂಶಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ACF ರಾಘವೇಂದ್ರ ನಾಯಕ್, RFO ಶಿಲ್ಪಾ ನಾಯಕ್ ಹಾಗೂ ಸಿರ್ಸಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ವನ್ಯಜೀವಿಗಳ ಬೇಟೆ, ಅವುಗಳ ಅಂಗಾಂಗಗಳ ಅಕ್ರಮ ಸಂಗ್ರಹ, ಸಾಗಣೆ ಮತ್ತು ಮಾರಾಟ ಕಾನೂನಿನ ಪ್ರಕಾರ ಗಂಭೀರ ಅಪರಾಧವಾಗಿದ್ದು, ಇಂತಹ ಚಟುವಟಿಕೆಗಳ ವಿರುದ್ಧ ನಿರಂತರ ನಿಗಾ ಹಾಗೂ ಕಠಿಣ ಕ್ರಮ ಮುಂದುವರಿಸಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.





