ಮೈಸೂರು ಜಿಲ್ಲೆ, ಟಿ. ನರಸೀಪುರ ತಾಲ್ಲೂಕು, ವರುಣಾ ವಿಧಾನಸಭಾ ವ್ಯಾಪ್ತಿಯ ತುಂಬಲ ಗ್ರಾಮದಲ್ಲಿ ಇದೇ ಸೆ.5 ರಂದು ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ವಿಚಾರವಾಗಿ ಸದರಿ ಗ್ರಾಮ ಹಾಗೂ ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದ ಯುವಕರನ್ನು ಪೊಲೀಸ್ ಠಾಣೆಗೆ ಕರೆಯಿಸಿ ಮನ ಬಂದಂತೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ, ಪೊಲೀಸರು ಸುಳ್ಳು ಸುಮೊಟೊ ಪ್ರಕರಣ ದಾಖಲು ಮಾಡಿರುವುದನ್ನು ಖಂಡಿಸಿ, ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಮುಂಬಾಗ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಯಾವುದೇ ದೂರು ದಾಖಲಾಗದ ಸಂದರ್ಭದಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಸಿದ ನಡೆಗೆ ದಸಂಸ ತೀವ್ರವಾಗಿ ಖಂಡಿಸಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು. ಆದರೇ, ಪೊಲೀಸರು ಸ್ವಯಂ ಪ್ರೇರಿತವಾಗಿ ಸುಮೋಟೋ ಸುಳ್ಳು ದೂರು ದಾಖಲಿಸಿಕೊಂಡು ದೌರ್ಜನ್ಯ ಎಸಗಿದೆ ಎಂದು ದಸಂಸ ಗಂಭೀರ ಆರೋಪ ಮಾಡಿತ್ತು.
ಕಳೆದ ಗುರುವಾರ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ, ಸಬ್ ಇನ್ಸ್ಪೆಕ್ಟರ್ ಜಗದೀಶ್ ದೂಳ್ ಶೆಟ್ಟಿ, ಹಾಗೂ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಘೋಷಣೆ ಕೂಗಿ ಪೊಲೀಸರು ದೌರ್ಜನ್ಯ ಎಸಗಿ 20 ದಿನವೇ ಕಳೆದರೂ ಕೃತ್ಯ ಎಸಗಿದ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮೇಲಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ಜಿಲ್ಲಾ ಸಂಚಾಲಕರಾದ ಬೆಟ್ಟಯ್ಯ ಕೋಟೆಯವರು ಮಾತನಾಡಿ, “ಕ್ಷುಲ್ಲಕ ಕಾರಣಕ್ಕೆ ಯುವಕರನ್ನು ಪೊಲೀಸ್ ಠಾಣೆಗೆ ಕರೆಯಿಸಿ ಮನಸೋ ಇಚ್ಛೆ ಥಳಿಸಿ ದೌರ್ಜನ್ಯ ಎಸಗಿದ್ದು ಅಕ್ಷಮ್ಯ. ಕಾನೂನು ರೀತ್ಯಾ ಕ್ರಮ ಕೈಗೊಳ್ಳದೆ ಈ ರೀತಿಯಾಗಿ ವರ್ತಿಸಿರುವುದನ್ನು ದಸಂಸ ಖಂಡಿಸುತ್ತದೆ. ತಾಲ್ಲೂಕಿನಲ್ಲಿ ದಸಂಸ ಸಕ್ರಿಯವಾಗಿ ಇರುವಾಗಲೇ ಇಂತಹ ದೌರ್ಜನ್ಯಗಳು ನಡೆದರೆ ಸಾಮಾಜಿಕ ನ್ಯಾಯದ ಸ್ಥಿತಿಯೇನು?. ನ್ಯಾಯ ಕೊಡಬೇಕಾದವರೇ ನ್ಯಾಯದ ಮೇಲೆ ಸವಾರಿ ಮಾಡುತ್ತಾ, ಅಧಿಕಾರ ದುರುಪಯೋಗ ಪಡೆಸಿದರೆ ಮತ್ಯಾರನ್ನು ನ್ಯಾಯ ಕೇಳುವುದು?.”

“ತಪ್ಪು ಯಾರೇ ಮಾಡಿರಲಿ, ತಪ್ಪಿತಸ್ಥರ ಮೇಲೆ ಕಾನೂನು ಚೌಕಟ್ಟಿನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಡಿವೈಎಸ್ಪಿ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ಶೋಚನಿಯ. ಇಂತಹ ನಡೆಯನ್ನು ದಸಂಸ ಸಹಿಸುವುದಿಲ್ಲ. ಪೊಲೀಸ್ ಅಧಿಕಾರಿಗಳ ನಡೆಯನ್ನು ಸಂಬಂಧಪಟ್ಟವರು ಆಲಿಸಿ ಕೂಡಲೇ ಕ್ರಮಕ್ಕೆ ಮುಂದಾಗಬೇಕು, ಅಮಾಯಕ ದಲಿತ ಯುವಕರಿಗೆ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಅಲಗೂಡು ಶಿವಕುಮಾರ್ ಮಾತನಾಡಿ, “ದಲಿತರ ಮೇಲೆ ಇತ್ತೀಚಿಗೆ ದೌರ್ಜನ್ಯ ಹೆಚ್ಚುತ್ತಿದೆ. ಶೋಷಣೆಗೋಳಗಾದವರಿಗೆ ನ್ಯಾಯ ಒದಗಿಸುವ, ರಕ್ಷಣೆ ನೀಡುವ ರಕ್ಷಕರೇ ದಾರಿ ತಪ್ಪಿರುವುದು ದುರ್ದೈವ. ಕಾನೂನು ಕೈಗೆತ್ತಿಕೊಂಡು ಅಧಿಕಾರ ದರ್ಪ ತೋರಿದ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವವರೆಗೆ ಹೋರಾಟ ನಿಲ್ಲುವುದಿಲ್ಲ. ಯುವಕರಿಗೆ ನ್ಯಾಯ ಸಿಗಬೇಕು “ಎಂದರು.
ಪ್ರತಿಭಟನಾ ನಿರತರು ತಹಶೀಲ್ದಾರ್ ಟಿ. ಜಿ. ಸುರೇಶಚಾರ್ ಅವರಿಗೆ ಮನವಿ ಸಲ್ಲಿಸಿ ಸಂಬಂಧಪಟ್ಟವರಿಗೆ ಕಳಿಸಿಕೋಡುವಂತೆ, ಕಾನೂನಿನ ಕ್ರಮಕ್ಕೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ‘ಸ್ವಸ್ಥ ನಾರಿ-ಸಶಕ್ತ ಪರಿವಾರ’ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಅನಿಲ್ ಚಿಕ್ಕಮಾದು
ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗ ಸ್ವಾಮಿ, ಚೋರನಹಳ್ಳಿ ಶಿವಣ್ಣ, ತಾಲ್ಲೂಕು ಸಂಚಾಲಕ ಕುಕ್ಕೂರು ರಾಜು, ಯರಿಯೂರು ರಾಜಣ್ಣ, ಅತ್ತಿಕುಪ್ಪೆ ರಾಮಕೃಷ್ಣ, ಚಿಕ್ಕ ಹುಣಸೂರು ರಾಜು, ಬನ್ನಹಳ್ಳಿ ಸೋಮಣ್ಣ, ಕುಬೇರಪ್ಪ, ಆರ್. ಮಣಿಕಂಠ ರಾಜು, ಜಾನಿ, ದೊರೆಸ್ವಾಮಿ,ಕಲ್ಲಹಳ್ಳಿ ಕುಮಾರ್, ಮಲಾರ ಮಹೇಶ್, ಮಂಜು ಶಂಕನಪುರ, ಗಟ್ಟವಾಡಿ ಮಹೇಶ್, ದೇವರಸನ ಹಳ್ಳಿ ಬಸವರಾಜು, ಮುತ್ತು, ಶಿವಶಂಕರ್, ಗುಣಗಲ್ಲಿ ಶಿವಕುಮಾರ್, ಶಾಂತಕುಮಾರ್, ದೊಡ್ಡ ಸ್ವಾಮಿ,ಯಡದೊರೆ ಮಹಾದೇವಯ್ಯ, ತಳಕಾಡು ಆನಂದ್, ಕಳ್ಳಿಮುದ್ದನಹಳ್ಳಿ ಚಂದ್ರು, ತಲಕಾಡು ಆನಂದ್, ದೊಡ್ಡಪುರ ಚರಣ್, ಗುಂಡ್ಲುಪೇಟೆ ನಂಜುಂಡಸ್ವಾಮಿ, ರಂಗಸ್ವಾಮಿ, ಹೊಮ್ಮರಗಳ್ಳಿ ಸಿದ್ದರಾಜು, ಸಣ್ಣ ಕುಮಾರ್, ಅನುಷಾ, ಹೊಳೆಯಪ್ಪ, ಮರಿಸ್ವಾಮಿ, ಯಾರಗನಹಳ್ಳಿ ಸಿದ್ದರಾಜು, ಕೃಷ್ಣಮೂರ್ತಿ ಬಸವಟ್ಟಿಗೆ, ವಾಟಾಳು ನಾಗರಾಜು, ಮರಿಸ್ವಾಮಿ, ಸೋಸಲೆ ಎಸ್. ನಂಜುಂಡಯ್ಯ, ಅಲಗೂಡು ನಾಗರಾಜ ಮೂರ್ತಿ, ಇಂಡವಾಳು ಹೊನ್ನಯ್ಯ, ಬನ್ನಹಳ್ಳಿ ಉಮೇಶ್, ಎಂ. ಡಿ. ರಾಮು, ಇಂಡವಾಳು ಹೊನ್ನಯ್ಯ, ನಾಗರಾಜು, ಎಂ. ಬಿ. ಲಿಂಗರಾಜು, ಕರೋಹಟ್ಟಿ ನಾಗೇಶ್, ಸೊನಹಳ್ಳಿ ಮಹದೇವಸ್ವಾಮಿ, ಕೇತಹಳ್ಳಿ ಪ್ರಶಾಂತ್, ಹುಚ್ಚಯ್ಯ, ತುಂಬಲ ಸಿದ್ದರಾಜು, ರವಿ, ಪ್ರತಾಪ್, ರಂಗಸಮುದ್ರ ರಂಗಸ್ವಾಮಿ, ಆಟೋ ನಂಜುಂಡ, ಮುಂಡಗದೊರೆ ಮೋಹನ್, ಕುಕ್ಕೂರು ಪ್ರಶಾಂತ್ ಸೇರಿದಂತೆ ಇನ್ನಿತರು ಇದ್ದರು.