ಹಾಸನದ ಅಧಿದೇವತೆ ಹಾಸನಾಂಬೆಯ ವಾರ್ಷಿಕ ದರ್ಶನೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಹಾಸನ ಜಿಲ್ಲಾಡಳಿತ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಈ ವರ್ಷ ಅಕ್ಟೋಬರ್ 9ರಿಂದ 23ರವರೆಗೆ ಹಾಸನಾಂಬೆ ಉತ್ಸವ ನಡೆಯಲಿದೆ. ಅ. 10ರಿಂದ 22ರ ತನಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರಲಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಹಾಸನ ನಗರದಲ್ಲಿ ನಡೆದ ಹಾಸನ ಜನಪ್ರತಿನಿಧಿಗಳ ಜೊತೆ ಸಚಿವ ಕೃಷ್ಣಭೈರೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮೊದಲ ಹಾಗೂ ಕೊನೆಯ ದಿನ ಪೂಜೆಗಷ್ಟೇ ಸೀಮಿತ. ಈ ವರ್ಷ 25 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ದಿನಕ್ಕೆ ಒಂದು ಸಾವಿರ ಪಾಸ್ ವಿತರಣೆ ಮಾಡುತ್ತೇವೆ” ಎಂದು ತಿಳಿಸಿದರು.
ವಿಐಪಿಗಳು ಹೆಚ್ಚು ಜನರನ್ನು ಕರೆದುಕೊಂಡು ಬರಬೇಡಿ
“ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅವಧಿ ಮುಗಿದ ಬಳಿಕ ವಿಐಪಿ ಗೇಟ್ಗೆ ಬೀಗ ಹಾಕುತ್ತೇವೆ. ವಿಐಪಿಗಳು ಕುಟುಂಬಕ್ಕೆ ಸಮೇತವಾಗಿ ಬನ್ನಿ, ಆದರೆ ತಮ್ಮ ಜೊತೆ ಹೆಚ್ಚು ಜನರನ್ನು ಕರೆದುಕೊಂಡು ಬರಬೇಡಿ. ಒಂದು ವೇಳೆ ಕರೆದುಕೊಂಡು ಬಂದರು ಸಾರ್ವಜನಿಕರ ಜೊತೆ ದರ್ಶನ ಮಾಡಲಿ. ಕೊನೆಯ 2 ದಿನ ಯಾವುದೇ ವಿಐಪಿ ದರ್ಶನ ಇರಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.