ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು (ಜುಲೈ 20) ಸಂಸತ್ ಭವನದತ್ತ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ತಂಡ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮಾತುಕತೆಗಾಗಿ CJP ತಂಡವನ್ನು ಆಹ್ವಾನಿಸಿದೆ ಎಂದು ‘ದ ಹಿಂದೂ’ ವರದಿ ಮಾಡಿದೆ.
ಕೇಂದ್ರ ಸರ್ಕಾರದ ಪರವಾಗಿ ದೆಹಲಿ ಡಿಸಿಪಿ ಸಚಿನ್ ಶರ್ಮಾ ಅವರು CJP ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಆರಂಭದಲ್ಲಿ CJP ತಂಡಕ್ಕೆ ಜಿಲ್ಲಾ ದಂಡಾಧಿಕಾರಿ (DM), ಕೇಂದ್ರ ಸರ್ಕಾರದ ಕಾರ್ಯದರ್ಶಿ ಹಾಗೂ ರಾಜ್ಯ ಸಚಿವರ (MoS) ಜೊತೆ ಮಾತುಕತೆ ನಡೆಸುವಂತೆ ಆಫರ್ ನೀಡಲಾಗಿತ್ತು. ಆದರೆ, ಪ್ರಧಾನಮಂತ್ರಿ ಅಥವಾ ಸಂಪುಟ ದರ್ಜೆಯ ಸಚಿವರ ಜೊತೆ ಮಾತ್ರ ಮಾತುಕತೆ ನಡೆಸುವುದಾಗಿ ಪಟ್ಟುಹಿಡಿದ CJP ಆ ಪ್ರಸ್ತಾಪಗಳನ್ನು ತಿರಸ್ಕರಿಸಿತ್ತು. ಅಲ್ಲದೆ, ಸಚಿವರ ಪಟ್ಟಿಯನ್ನು ಡಿಸಿಪಿಗೆ ಸಲ್ಲಿಸಿತ್ತು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಲೈವ್ ಅಪ್‌ಡೇಟ್ | ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ; ಸಂಸತ್ ಚಲೋ
ಈ ಕುರಿತು CJP ವಕ್ತಾರ ಸೌರವ್ ದಾಸ್, X ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ತಾವು ಹಾಗೂ ಅಶುತೋಷ್ ರಂಕಾ ಅವರು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ.
“ಬೆಳಗ್ಗೆ ಸರ್ಕಾರದಿಂದ ಮಾತುಕತೆಗೆ ಆಹ್ವಾನ ಬಂದಿದ್ದು, ನಮ್ಮ ಬೇಡಿಕೆಗಳು ಸ್ಪಷ್ಟವಾಗಿವೆ. ಯುವಕರು ಅಪಾರ ಸಂಖ್ಯೆಯಲ್ಲಿ ಸೇರಿದ್ದಾರೆ. ಅಶುತೋಷ್ ರಂಕಾ ಮತ್ತು ನಾನು, ಕಾಕ್ರೋಚ್ ಜನತಾ ಪಾರ್ಟಿ ಪರವಾಗಿ ಜೆಪಿ ನಡ್ಡಾ ಅವರನ್ನು ಭೇಟಿಯಾಗಲು ತೆರಳುತ್ತಿದ್ದೇವೆ. ನಾವು ಗೆಲ್ಲುತ್ತೇವೆ” ಎಂದು ದಾಸ್ ಬರೆದುಕೊಂಡಿದ್ದಾರೆ.





