ಕಲುಷಿತ ಕೆಮ್ಮಿನ ಸಿರಪ್ ಸೇವಿಸಿ 11 ಮಕ್ಕಳು ಸಾವನ್ನಪ್ಪಿರುವ ಪ್ರಕರಣ ಭಾರೀ ವಿರೋಧ, ವಿವಾದಕ್ಕೆ ಗುರಿಯಾಗಿದೆ. ಕೇಂದ್ರ ಸರ್ಕಾರವು 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡದಂತೆ ನಿರ್ದೆಶನ ಹೊರಡಿಸಿದೆ. ಮಕ್ಕಳಿಗೆ ನೀಡಲಾಗಿದ್ದ ಕೋಲ್‌ಡ್ರಿಫ್ ಸಿರಪ್ ಮಾರಾಟವನ್ನು ಮಧ್ಯಪ್ರದೇಶ ಸರ್ಕಾರ ನಿಷೇಧಿಸಿದೆ. ಕೇರಳದಲ್ಲಿಯೂ ಸಿರಪ್ ಅನ್ನು ನಿಷೇಧಿಸಿ, ಅಲ್ಲಿ ಸರ್ಕಾರ ಆದೇಶಿಸಿದೆ.
ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ಆ ಸಿರಪ್ ಕೊಟ್ಟು, ಮಕ್ಕಳ ಸಾವಿಗೆ ಕಾರಣನಾಅಗಿದ್ದ ವೈದ್ಯನನ್ನು ಕೂಡ ಬಂಧಿಸಲಾಗಿದೆ ಎಂದು ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದಾರೆ. ಚಿಂದ್ವಾರ ಜಿಲ್ಲೆಯ ಪಾರಾಸಿಯಾದ ಮಕ್ಕಳ ತಜ್ಞ ಪ್ರವೀಣ್ ಸೋನಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಸೋನಿ ಅವರು ಸರ್ಕಾರಿ ವೈದ್ಯರಾಗಿದ್ದಾರೆ. ಆದಾಗ್ಯೂ, ಅವರು ಖಾಸಗಿ ಕ್ಲಿನಿಕ್ಅನ್ನು ನಡೆಸುತ್ತಿದ್ದು, ಆ ಕ್ಲಿನಿಕ್‌ಗೆ ಬಂದಿದ್ದ ಮಕ್ಕಳಿಗೆ ಸಿರಪ್ ಕೊಟ್ಟಿದ್ದರು ಎಂದು ವರದಿಯಾಗಿದೆ.
ಸರ್ಕಾರವು ಈ ಹಿಂದೆ ಕೋಲ್‌ಡ್ರಿಫ್ ಸಿರಪ್ ಮಾರಾಟವನ್ನು ನಿಷೇಧಿಸಿತ್ತು. ಔಷಧದ ಮಾದರಿಗಳಲ್ಲಿ 48.6% ಡೈಥಿಲೀನ್ ಗ್ಲೈಕಾಲ್ ಎಂಬ ವಿಷಕಾರಿ ವಸ್ತು ಪತ್ತೆಯಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ಈ ಸಿರಪ್‌ಅನ್ನು ಪರೀಕ್ಷಿಸಿದ್ದ ಚೆನ್ನೈನಲ್ಲಿರುವ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ಔಷಧ ವಿಶ್ಲೇಷಕರು ‘ಪ್ರಮಾಣಿತ ಗುಣಮಟ್ಟದಲ್ಲಿಲ್ಲ’ ಎಂದು ವರದಿ ನೀಡಿದ್ದರು. ಆ ವರದಿ ಆಧರಿಸಿ ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶನಾಲಯವು ಸಿರಪ್ ಮಾರಾಟ ನಿಷೇಧಿಸಿತ್ತು.
ಕೋಲ್‌ಡ್ರಿಫ್ ಲೇಬಲ್‌ನ ಕೆಮ್ಮಿನ ಸಿರಪ್ ತಯಾರಿಸಿದ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿರುವ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ವಿರುದ್ಧವೂ ಮಧ್ಯಪ್ರದೇಶ ಸರ್ಕಾರ ಪ್ರಕರಣ ದಾಖಲಿಸಿದೆ.
ಈ ಲೇಖನ ಓದಿದ್ದೀರಾ?: ಸಮೀಕ್ಷೆಯ ಸಮೀಕ್ಷೆ; ನಗರವಾಸಿಗಳ ಜಾತಿ ಮನಸ್ಥಿತಿ ಅನಾವರಣ
ಮಧ್ಯಪ್ರದೇಶದಲ್ಲಿ ಸಂಭವಿಸಿರುವ ಸಾವುಗಳನ್ನು ಅಲ್ಲಿನ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ‘ಅತ್ಯಂತ ದುರಂತ’ ಎಂದಿದ್ದಾರೆ. ಈ ಸಾವುಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
“ಕೋಲ್‌ಡ್ರಿಫ್ ಸಿರಪ್‌ನಿಂದಾಗಿ ಚಿಂದ್ವಾರದಲ್ಲಿ ಮಕ್ಕಳ ಸಾವುಗಳು ಅತ್ಯಂತ ದುರಂತ. ಈ ಸಿರಪ್ ಮಾರಾಟವನ್ನು ಮಧ್ಯಪ್ರದೇಶದಾದ್ಯಂತ ನಿಷೇಧಿಸಲಾಗಿದೆ. ಸಿರಪ್ ತಯಾರಿಸುವ ಕಂಪನಿ ಮೇಲೂ ನಿಷೇಧ ಹೇರಲಾಗುತ್ತಿದೆ” ಎಂದು ಹೇಳಿದ್ದಾರೆ.