ಕಳೆದ ಒಂದು ವರ್ಷದಲ್ಲಿ, ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿದ್ದ (ಆರ್‌ಎನ್‌ಪಿ) 75 ಹುಲಿಗಳ ಪೈಕಿ 25 ಹುಲಿಗಳು ನಾಪತ್ತೆಯಾಗಿವೆ ಎಂದು ರಾಜಸ್ಥಾನದ ಮುಖ್ಯ ವನ್ಯಜೀವಿ ವಾರ್ಡನ್ ಪವನ್ ಕುಮಾರ್ ಉಪಾಧ್ಯಾಯ ಹೇಳಿದ್ದಾರೆ.
ಒಂದು ವರ್ಷದಲ್ಲಿ ಇಷ್ಟೊಂದು ಅಧಿಕ ಸಂಖ್ಯೆಯ ಹುಲಿಗಳು ನಾಪತ್ತೆಯಾಗಿರುವ ಬಗ್ಗೆ ಅಧಿಕೃತವಾಗಿ ವರದಿಯಾಗಿರುವುದು ಇದೇ ಮೊದಲು. ಈ ಹಿಂದೆ, 2019ರ ಜನವರಿ ಮತ್ತು 2022ರ ಜನವರಿ ನಡುವೆ ಇದೇ ಉದ್ಯಾನವನದಿಂದ 13 ಹುಲಿಗಳು ನಾಪತ್ತೆಯಾಗಿದ್ದವು.
ಹುಲಿಗಳು ನಾಪತ್ತೆಯಾಗಿರುವ ಬಗ್ಗೆ ತನಿಖೆ ನಡೆಸಲು ವನ್ಯಜೀವಿ ಇಲಾಖೆಯು ತ್ರಿಸದಸ್ಯ ಸಮಿತಿಯನ್ನು ರಚಿಸಿದೆ. ಎರಡು ತಿಂಗಳೊಳಗೆ ವರದಿ ನೀಡುವಂತೆ ಇಲಾಖೆ ಸೂಚಿಸಿದೆ. ಸಮಿತಿಯು ಉದ್ಯಾನವನದ ಮೇಲ್ವಿಚಾರಣಾ ದಾಖಲೆಗಳನ್ನು ಪರಿಶೀಲಿಸಲು ಮುಂದಾಗಿದೆ. ಹುಲಿಗಳ ನಾಪತ್ತೆಯಲ್ಲಿ ಉದ್ಯಾನವನದ ಅಧಿಕಾರಿಗಳು ಲೋಪ ಎಸಗಿರುವುದು ಕಂಡುಬಂದಲ್ಲಿ ಕ್ರಮಕ್ಕೆ ಶಿಫಾರಸು ಮಾಡಲಿದೆ.
ಗಮನಾರ್ಹವಾಗಿ, ಕೆಳದ ಒಂದು ವರ್ಷದಲ್ಲಿ ನಾಪತ್ತೆಯಾದ 25 ಹುಲಿಗಳ ಪೈಕಿ, 2024ರ ಮೇ 17ರಿಂದ ಸೆಪ್ಟೆಂಬರ್ 30ರ ನಡುವೆ 14 ಹುಲಿಗಳು ನಾಪತ್ತೆಯಾಗಿವೆ.
ಈ ವರದಿ ಓದಿದ್ದೀರಾ?: ಸಾವಯವ ಕೃಷಿ | ರೈತರಿಗೆ ಲಾಭ – ಗ್ರಾಹಕರಿಗೆ ಆರೋಗ್ಯ; ಆದರೂ ಹಿಂದುಳಿದ ಕರ್ನಾಟಕ!
ಹುಲಿಗಳು ನಾಪತ್ತೆಯಾಗುತ್ತಿರುವ ಬಗ್ಗೆ ಉದ್ಯಾನವನದ ಕ್ಷೇತ್ರ ನಿರ್ದೇಶಕರಿಗೆ ಹಲವು ಬಾರಿ ನೋಟಿಸ್ ಕಳುಹಿಸಿದ್ದರೂ ಯಾವುದೇ ಮಹತ್ವದ ಸುಧಾರಣೆ ಕಂಡುಬಂದಿಲ್ಲ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.
“ಇತ್ತೀಚೆಗೆ, ನಾನು ಸಾಪ್ತಾಹಿಕ ನಿಗಾ ವರದಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಈ ಹುಲಿಗಳು ಟ್ರ್ಯಾಪ್ ಕ್ಯಾಮೆರಾದಲ್ಲಿ ದಾಖಲಾಗಿಲ್ಲ ಎಂಬುದು ವರದಿಯಲ್ಲಿ ಕಂಡುಬಂದಿದೆ. ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತಿದೆ” ಎಂದು ಮುಖ್ಯ ವನ್ಯಜೀವಿ ವಾರ್ಡನ್ ಪವನ್ ಕುಮಾರ್ ಉಪಾಧ್ಯಾಯ ಹೇಳಿದ್ದಾರೆ.