ದೆಹಲಿಯ ಜಂತರ್ಮಂತರ್ನಲ್ಲಿ ಸೋನಮ್ ವಾಂಗ್ಚುಕ್ ಮತ್ತು ಸಿಜೆಪಿ ಯುವಜನರು ಪ್ರತಿಭಟನೆಗೆ ನಡೆಸುತ್ತಿರುವ ಸ್ಥಳಕ್ಕೆ 30-40 ಮಂದಿ ನುಗ್ಗಿದ್ದಾರೆ. ಈ ನುಸುಳುಕೋರರು ಬಿಜೆಪಿ ಮತ್ತು ದೆಹಲಿ ಪೊಲೀಸರಿಗೆ ಸಂಬಂಧಿಸಿದವರಾಗಿದ್ದು, ಪ್ರಚೋದನಾತ್ಮಕ ಮತ್ತು ದೇಶವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲು ಸಂಚು ರೂಪಿಸುತ್ತಿದ್ದಾರೆ ಎಂದು ಕಾಕ್ರಾಚ್ ಜನತಾ ಪಾರ್ಟಿ (CJP) ಗಂಭೀರ ಆರೋಪ ಮಾಡಿದೆ.
ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಸಿಜೆಪಿ ವಕ್ತಾರ ಅಶುತೋಷ್ ರಂಕಾ ಅವರು, “ಬಿಜೆಪಿ ಮತ್ತು ದೆಹಲಿ ಪೊಲೀಸರೊಂದಿಗೆ ಸಂಬಂಧ ಹೊಂದಿರುವವರು ಪ್ರತಿಭಟನಾ ಸ್ಥಳಕ್ಕೆ ನುಸುಳಿದ್ದಾರೆ. ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಸಂಚು ಹೆಣೆದಿದ್ದಾರೆ. ಇವರಿಗೂ ತಮ್ಮ ಪಕ್ಷಕ್ಕೆ ಅಥವಾ ಸೋನಮ್ ವಾಂಗ್ಚುಕ್ ಅವರಿಗೂ ಯಾವುದೇ ಸಂಬಂಧವಿಲ್ಲ. ಈ ಪಿತೂರಿ ಶಕ್ತಿಗಳನ್ನು ಗುರುತಿಸಿ ದೂರ ಇಡಬೇಕು” ಎಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಮತ್ತೊಂದೆಡೆ, ಜುಲೈ 20ರಂದು ಹಮ್ಮಿಕೊಳ್ಳಲಾಗಿರುವ ಸಂಸತ್ ಚಲೋ ಮೆರವಣಿಗೆಯನ್ನು ಭಾರತದ ‘ಎರಡನೇ ಸ್ವಾತಂತ್ರ್ಯ ಚಳವಳಿ’ ಎಂದು ಸೋನಮ್ ವಾಂಗ್ಚುಕ್ ಬಣ್ಣಿಸಿದ್ದಾರೆ. ತಮ್ಮ ಪತ್ನಿಯ ಮೂಲಕ ಬೆಂಬಲಿಗರಿಗೆ ಸಂದೇಶ ರವಾನಿಸಿರುವ ವಾಂಗ್ಚುಕ್, “ಈ ಮೆರವಣಿಗೆಯನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಬೇಕು” ಮನವಿ ಮಾಡಿದ್ದಾರೆ.
ಇದೇ ವೇಳೆ, ವಾಂಗ್ಚುಕ್ ಅವರಿಗ ಚಿಕಿತ್ಸೆ ನೀಡುತ್ತಿರುವ ದೆಹಲಿಯ ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ಮೇಲೆ ನಾವು ನಂಬಿಕೆಯನ್ನು ಕಳೆದುಕೊಂಡಿದ್ದೇವೆ ಎಂದು ವಾಂಗ್ಚುಕ್ ಅವರ ಪತ್ನಿ ತಿಳಿಸಿದ್ದಾರೆ. ಅವರನ್ನು ತಮಗೆ ಇಷ್ಟಬಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಅನುಮತಿ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಬಲವಂತವಾಗಿ ಹೊತ್ತೋಯ್ದ ಬಳಿಕ, ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅಮರಣಾಂತ ಉಪವಾಸ ಆರಂಭಿಸಿದ್ದಾರೆ.




