ಮಧ್ಯಪ್ರದೇಶದಲ್ಲಿ ಪ್ರತಿ ದಿನ ಸರಾಸರಿ 7 ಮಂದಿ ದಲಿತ ಮತ್ತು ಬುಡಕಟ್ಟು ಸಮುದಾಯಗಳ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂದು ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರ ತಿಳಿಸಿದೆ.
ಪ್ರಸ್ತುತ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಕೇಳಿದ್ದ ಪ್ರಶ್ನೆಗೆ ಸರ್ಕಾರ ಉತ್ತರಿಸಿದೆ. “2022ರಿಂದ 2024ರ ನಡುವೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಟ್ಟು 7,418 ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ” ಎಂದು ಸರ್ಕಾರ ಹೇಳಿದೆ. ಅಂದರೆ, ದಿನನಿತ್ಯ ಸರಾಸರಿ 7 ಮಂದಿ ದಲಿತ ಮತ್ತು ಬುಡಕಟ್ಟು ಸಮುದಾಯಗಳ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದಿವೆ.
ಅಲ್ಲದೆ, ಇದೇ 2022ರಿಂದ 2024ರ ಅವಧಿಯಲ್ಲಿ ದಲಿತ ಮತ್ತು ಬುಡಕಟ್ಟು ಸಮುದಾಯದ 558 ಮಹಿಳೆಯರ ಹತ್ಯೆಗಳಾಗಿವೆ. 338 ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆದಿವೆ. ಸುಮಾರು 1,906 ಎಸ್‌ಸಿ/ಎಸ್‌ಟಿ ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
ಒಟ್ಟಾರೆಯಾಗಿ ಕಳೆದ ಮೂರು ವರ್ಷಗಳಲ್ಲಿ ಎಸ್‌ಸಿ/ಎಸ್‌ಟಿ ಮಹಿಳೆಯರ ಮೇಲಿನ ಒಟ್ಟು 44,978 ಅಪರಾಧ ಪ್ರಕರಣಗಳು ದಾಖಲಾಗಿವೆ. ಅಂದರೆ, ಎಸ್‌ಸಿ/ಎಸ್‌ಟಿ ಮಹಿಳೆಯರ ಮೇಲೆ ದಿನನಿತ್ಯ ಸರಾಸರಿ 41 ಅಪರಾಧ ಪ್ರಕರಣಗಳು ಘಟಿಸುತ್ತಿವೆ.