ದೇಶಾದ್ಯಂತ ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಅಪಘಾತಗಳಿಗೆ ಸಂಚಾರ ನಿಯಮಗಳ ಉಲ್ಲಂಘನೆಗಳು ಕಾರಣವೆಂದು ಹೇಳಲಾಗುತ್ತಿದ್ದರೂ, ರಸ್ತೆಗುಂಡಿಗಳು ಹಾಗೂ ಅಸಮರ್ಪಕ ರಸ್ತೆಗಳೂ ಹೆಚ್ಚು ಅಪಘಾತಗಳಿಗೆ ಕಾರಣವೆಂದು ಹೇಳಲಾಗಿದೆ. ಈ ರಸ್ತೆ ಅಪಘಾತಗಳಲ್ಲಿ ಒಂದೇ ವರ್ಷದಲ್ಲಿ 77,539 ಮಂದಿ ದ್ವಿಚಕ್ರ (ಬೈಕ್) ವಾಹನ ಸವಾರರು ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.
2023ರಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳು ಮತ್ತು ಸಾವುಗಳ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ವರದಿ ಬಿಡುಗಡೆ ಮಾಡಿದೆ. ವರದಿ ಪ್ರಕಾರ, 2023ರಲ್ಲಿ ಒಟ್ಟು 77,539 ಮಂದಿ ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಈ ಪ್ರಮಾಣವು ದೇಶದಲ್ಲಿ ಘಟಿಸಿರುವ ಒಟ್ಟು ಅಪಘಾತ ಸಾವುಗಳಲ್ಲಿ 54%ರಷ್ಟಾಗಿದೆ.
ದೇಶದಲ್ಲಿ 2023ರಲ್ಲಿ ರಸ್ತೆ ಅಪಘಾತಗಳಿಂದ ಒಟ್ಟು 1,72,890 ಮಂದಿ ಸಾವನ್ನಪ್ಪಿದ್ದಾರೆ. ಈ ಸಾವುಗಳ ಸಂಖ್ಯೆ 2022ಕ್ಕೆ ಹೋಲಿಸಿದರೆ 2.6%ರಷ್ಟು ಏರಿಕೆಯಾಗಿವೆ. 2022ರಲ್ಲಿ ರಸ್ತೆ ಅಪಘಾತದಲ್ಲಿ ಒಟ್ಟು 1,68,491 ಮಂದಿ ಮೃತಪಟ್ಟಿದ್ದರು.
2023ರಲ್ಲಿ ಸಂಭವಿಸಿದ ಅಪಘಾತ ಸಾವುಗಳಲ್ಲಿ ಅಗ್ರ ಸ್ಥಾನದಲ್ಲಿ ಬೈಕ್ ಅಪಘಾತ ಸಾವುಗಳಿವೆ. ಇನ್ನು, 2ನೇ ಸ್ಥಾನದಲ್ಲಿ ಕಾರು/ಟ್ಯಾಕ್ಸಿ ಅಪಘಾತ ಸಾವುಗಳಿವೆ.
ಈ ಲೇಖನ ಓದಿದ್ದೀರಾ?: ಭಾರತ-ಚೀನಾ-ರಷ್ಯಾ ದೋಸ್ತಿ: ಅಮೆರಿಕದ ನಿಲುವೇನು?
ಇನ್ನು, 35,000ಕ್ಕಿಂತ ಹೆಚ್ಚು ಮಂದಿ ಪಾದಚಾರಿಗಳು ಕೂಡ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಇವರಲ್ಲಿ, 25,000ಕ್ಕೂ ಹೆಚ್ಚು ಮಂದಿ ದ್ವಿಚಕ್ರ ವಾಹನಗಳು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಬೈಕ್ ಡಿಕ್ಕಿ ಹೊಡೆದು ಸಾವನ್ನಪ್ಪಿದ ಪಾದಚಾರಿಗಳ ಸಂಖ್ಯೆಯ ತಮಿಳುನಾಡಿನಲ್ಲಿ ಅಧಿಕವಾಗಿದೆ. ಅಲ್ಲಿ, 1,796 ಮಂದಿ ಪಾದಚಾರಿಗಳು ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 938, ಬಿಹಾರದಲ್ಲಿ 865, ಕರ್ನಾಟಕದಲ್ಲಿ 787 ಹಾಗೂ ಮಹಾರಾಷ್ಟ್ರ 747 ಮಂದಿ ಪಾದಚಾರಿಗಳು ಬೈಕ್ ಡಿಕ್ಕಿಗೆ ಬಲಿಯಾಗಿದ್ದಾರೆ.