ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಭಖರ್ಪುರ ಗ್ರಾಮದಲ್ಲಿ ಎಂಟು ವರ್ಷದ ದಲಿತ ಸಮುದಾಯದ ಬಾಲಕನೋರ್ವನನ್ನು ನೀರಿನ ಪಾತ್ರೆ ಮುಟ್ಟಿದ ಕಾರಣಕ್ಕೆ ಮರಕ್ಕೆ ತಲೆಕೆಳಗಾಗಿ ನೇತುಹಾಕಿ ಥಳಿಸಿರುವ ಆಘಾತಕಾರಿ ಘಟನೆ ನಡೆದಿದೆ. ಈ ದೌರ್ಜನ್ಯದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಬಾಲಕನ ಮೇಲಿನ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದ ಅವನ ತಾಯಿ ಪುರಿ ದೇವಿ ಮತ್ತು ಅಜ್ಜಿಯ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನ ತಾಯಿ ಪುರಿ ದೇವಿ ಅವರ ಪ್ರಕಾರ, ಶುಕ್ರವಾರ ಗ್ರಾಮದಲ್ಲಿ ಆಟವಾಡುತ್ತಿದ್ದ ಅವರ ಮಗನಿಗೆ ನರನಾರಾಮ್ ಪ್ರಜಾಪತ್ ಮತ್ತು ದೇಮಾರಾಮ್ ಪ್ರಜಾಪತ್ ಎಂಬಿಬ್ಬರು ಸ್ನಾನಗೃಹ ಸ್ವಚ್ಛಗೊಳಿಸುವಂತೆ ಮತ್ತು ಕಸ ಸಂಗ್ರಹಿಸುವಂತೆ ಆದೇಶಿಸಿದ್ದಾರೆ.
ಕೆಲಸ ಮುಗಿಸಿದ ಬಾಲಕ ಬಾಯಾರಿಕೆಯಿಂದ ನೀರು ಕುಡಿಯಲೆಂದು ಆರೋಪಿಗಳ ನೀರಿನ ಪಾತ್ರೆ ಮುಟ್ಟಿದಾಗ, ನರನಾರಾಮ್ ಆತನನ್ನು ತನ್ನ ನಿವಾಸಕ್ಕೆ ಕರೆದೊಯ್ದು ಮರಕ್ಕೆ ತಲೆಕೆಳಗಾಗಿ ಕಟ್ಟಿಹಾಕಿ ಥಳಿಸಿದ್ದಾನೆ. ಈ ದೌರ್ಜನ್ಯವು ಬಾಲಕನ ಸಂಬಂಧಿಯೊಬ್ಬರು ಘಟನೆಯನ್ನು ತಮ್ಮ ಫೋನ್‌ನಲ್ಲಿ ಚಿತ್ರೀಕರಿಸುವವರೆಗೆ ಮುಂದುವರೆದಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಒಬಿಸಿಗಳಿಗೆ ಸಿಗಬೇಕಿದೆ ಶಾಸನಸಭೆಗಳಲ್ಲಿ ಮೀಸಲಾತಿ
ಪೊಲೀಸ್ ಅಧಿಕಾರಿ ಸುಖರಾಮ್ ಬಿಷ್ಣೋಯ್, ಪ್ರಾಥಮಿಕ ತನಿಖೆ ಮತ್ತು ವೈದ್ಯಕೀಯ ಪರೀಕ್ಷೆಯಿಂದ ಬಾಲಕನ ಮೇಲೆ ತೀವ್ರವಾಗಿ ಹಲ್ಲೆ ನಡೆದಿರುವುದು ಮತ್ತು ತಲೆಕೆಳಗಾಗಿ ನೇತುಹಾಕಲಾಗಿರುವುದು ದೃಢಪಟ್ಟಿದೆ. ಆದರೆ, ನೀರಿನ ಪಾತ್ರೆ ಮುಟ್ಟಿದ ಕಾರಣಕ್ಕೆ ಈ ದೌರ್ಜನ್ಯ ನಡೆದಿದೆ ಎಂಬ ಆರೋಪವನ್ನು ಇನ್ನೂ ತನಿಖೆ ಮಾಡಲಾಗುತ್ತಿದೆ. ಆರೋಪಿಗಳಾದ ನರನಾರಾಮ್, ದೇಮಾರಾಮ್ ಮತ್ತು ರೂಪರಾಮ್ ಪ್ರಜಾಪತ್ ಎಂಬ ಭಖರ್ಪುರ ನಿವಾಸಿಗಳ ವಿರುದ್ಧ ಆಗಸ್ಟ್ 30 ರಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವಿಕೆ), ಸೆಕ್ಷನ್ 127(2) (ಅಕ್ರಮವಾಗಿ ಬಂಧಿಸುವುದು), ಸೆಕ್ಷನ್ 137(2) (ಅಪಹರಣ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ, 1989ರ ಸಂಬಂಧಿತ ವಿಭಾಗಗಳಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.