ಪಂಜಾಬ್ನ ಕರಡು ಮತದಾರರ ಪಟ್ಟಿಯಿಂದ (ಎಸ್ಐಆರ್) ತಮ್ಮ ಹೆಸರನ್ನು ‘ಸ್ಥಳಾಂತರಗೊಳಿಸಿದ’ (ಶಿಫ್ಟ್) ವಿಚಾರಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ, “ನಾನು ಪಕ್ಷ ತೊರೆದಿದ್ದಕ್ಕೆ ಸೇಡಿನ ರಾಜಕಾರಣ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
2022ರಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಪಂಜಾಬ್ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಘವ್ ಚಡ್ಡಾ, ಕಳೆದ ಏಪ್ರಿಲ್ ತಿಂಗಳಿನಲ್ಲಿ ಅವರು ಆಪ್ಗೆ ಅಧಿಕೃತವಾಗಿ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಪಕ್ಷಾಂತರ ಮಾಡಿದ ಕೆಲವೇ ತಿಂಗಳುಗಳಲ್ಲಿ ರಾಜ್ಯದ ಮತದಾರರ ಪಟ್ಟಿಯಿಂದಲೇ ಅವರ ಹೆಸರನ್ನು ಕೈಬಿಟ್ಟಿರುವುದು ಭಾರೀ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಚುನಾವಣಾ ಆಯೋಗವು ಇತ್ತೀಚೆಗೆ ಕೈಗೊಂಡಿದ್ದ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision- SIR) ಪ್ರಕ್ರಿಯೆಯ ಅಡಿಯಲ್ಲಿ ಪಂಜಾಬ್ನ ಕರಡು ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಆಗಸ್ಟ್ 13ರಂದು ಪ್ರಕಟವಾದ ಗೈರುಹಾಜರಿ, ಸ್ಥಳಾಂತರಗೊಂಡ, ಮೃತಪಟ್ಟ ಮತ್ತು ನಕಲಿ ಮತದಾರರ (ASDD) ಪಟ್ಟಿಯಲ್ಲಿ ಚಡ್ಡಾ ಅವರ ಹೆಸರಿದ್ದು, ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂಬ ಕಾರಣವನ್ನು ನಮೂದಿಸಿ ಅವರ ಹೆಸರನ್ನು ಅಧಿಕೃತವಾಗಿ ಡಿಲೀಟ್ ಮಾಡಲಾಗಿದೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ರಾಘವ್ ಚಡ್ಡಾ, “ನಾನು ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಸೇರ್ಪಡೆಯಾದಾಗಿನಿಂದ ಆಪ್ ನಾಯಕರು ಹತಾಶರಾಗಿದ್ದಾರೆ. ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು, ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುವ ಯತ್ನವಾಗಿ ಈ ಕೃತ್ಯ ಎಸಗಲಾಗಿದೆ. ಮತದಾರರ ಪಟ್ಟಿಯಿಂದ ನನ್ನ ಹೆಸರು ತೆಗೆದುಹಾಕಿರುವುದು ಆಪ್ನ ಹತಾಶೆಯ ಪ್ರತೀಕವಷ್ಟೇ” ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇವಲ ರಾಘವ್ ಚಡ್ಡಾ ಅವರ ಹೆಸರು ಮಾತ್ರವಲ್ಲದೆ ಪಂಜಾಬ್ ರಾಜ್ಯದಾದ್ಯಂತ ಭಾರಿ ಸಂಖ್ಯೆಯ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇತ್ತೀಚಿನ ಈ ವಿಶೇಷ ಪರಿಷ್ಕರಣೆ ಕಾರ್ಯದ ವೇಳೆ ರಾಜ್ಯಾದ್ಯಂತ ಒಟ್ಟು 20.66 ಲಕ್ಷ ಜನರ ಹೆಸರನ್ನು ಕರಡು ಪಟ್ಟಿಯಿಂದ ಅಳಿಸಿಹಾಕಲಾಗಿದೆ. ಅಂದರೆ, ರಾಜ್ಯದ ಒಟ್ಟು ಮತದಾರರ ಪೈಕಿ ಶೇ 9.7ರಷ್ಟು ಮಂದಿಯನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ.





