ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಇತ್ತೀಚೆಗೆ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಆಕ್ರೋಶ ಕಾರಣವಾಗಿತ್ತು. ಆ ಘಟನೆಯ ಆತಂಕ ಮಾಸುವ ಮುನ್ನವೇ ಕೋಲ್ಕತ್ತಾದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಕೃತ್ಯ ಬುಧವಾರ ತಡರಾತ್ರಿ ನಡೆದಿದೆ. ಕೃತ್ಯದ ಬಗ್ಗೆ ಪೊಲೀಸರ ಬಳಿ ಮೊದಲ ಬಾರಿಗೆ ಹೇಳಿಕೆ ದಾಖಲಿಸಿರುವ ಸಂತ್ರಸ್ತೆ, ‘ಕಾಲು ಹಿಡಿದು ಬೇಡಿಕೊಂಡರೂ ಕಾಮುಕರು ಬಿಡಲಿಲ್ಲ’ ಎಂದು ಹೇಳಿದ್ದಾರೆ.
ಬುಧವಾರ ತಡರಾತ್ರಿ, ಕೊಲ್ಕತ್ತಾ ಕಾನೂನು ಕಾಲೇಜಿನ ಸೆಕ್ಯುರಿಟಿ ಕೊಠಡಿಯಲ್ಲಿ ಮೂವರು ಕಾಮುಕರು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಕಾಲೇಜಿನ ಸೆಕ್ಯುರಿಟಿಗೆ ಬೆದರಿಕೆ ಹಾಕಿ, ಆತನನ್ನು ಕೊಠಡಿಯಿಂದ ಹೊರ ಕಳಿಸಿ, ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣ ಸಂಬಂಧ ಪೊಲೀಸರಿಗೆ ಹೇಳಿಕೆ ನೀಡಿರುವ ಸಂತ್ರಸ್ತೆ, “ಬುಧವಾರ ಸಂಜೆ ಟಿಎಂಸಿ ವಿದ್ಯಾರ್ಥಿ ವಿಭಾಗದ ಸಭೆ ಇತ್ತು. ಸಭೆಯ ಬಳಿಕ ಹಾಸ್ಟೆಲ್‌ಗೆ ತೆರಳುವಾಗ ‘ಜೆ, ಎಂ ಮತ್ತು ಪಿ’ ಎಂಬ ಅಕ್ಷರಗಳಿಂದ ಗುರುತಿಲಾದ ಮೂವರು ನನ್ನನ್ನು ಎಳೆದೊಯ್ದರು. ‘ಜೆ’ ಎಂಬಾತ ನನ್ನ ಮೇಲೆ ಅತ್ಯಾಚಾರ ಎಸಗಿದ್ದು, ‘ಎಂ ಮತ್ತು ಪಿ’ ಎಂಬವರು ಕೃತ್ಯವನ್ನು ನೋಡುತ್ತ ನಿಂತಿದ್ದರು” ಎಂದು ವಿವರಿಸಿದ್ದಾರೆ
“ಕಾಮುಕರ ದಾಳಿಯನ್ನು ನಾನು ವಿರೋಧಿಸಿದೆ. ಅವರ ಕಾಲು ಹಿಡಿದು ಬೇಡಿಕೊಂಡೆ. ಆದರೆ, ಅವರು ನನ್ನನ್ನು ಬಿಡಲಿಲ್ಲ” ಎಂದು ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂವರು ಆರೋಪಿಗಳನ್ನೂ ಬಂಧಿಸಿದ್ದಾರೆ.
ಬಂಧಿತರನ್ನು ಮನೋಜಿತ್ ಮಿಶ್ರಾ (ಮಾಜಿ ವಿದ್ಯಾರ್ಥಿ ಮತ್ತು ತಾತ್ಕಾಲಿಕ ಸಿಬ್ಬಂದಿ), ಝೈಬ್ ಅಹ್ಮದ್ (ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿ), ಹಾಗೂ ಪ್ರಮಿತ್ ಮುಖರ್ಜಿ (ಇನ್ನೊಬ್ಬ ವಿದ್ಯಾರ್ಥಿ) ಎಂದು ಗುರುತಿಸಲಾಗಿದೆ.