ಒಂದು ವರ್ಷದ ಬಾಲಕಿಯ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿದ್ದ ವೇಳೆಯೇ ಅಪಾರ್ಟ್‌ಮೆಂಟ್‌ನ ಒಂದು ಭಾಗ ಕುಸಿದು ಬಿದ್ದು, 15ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.
ಮಹಾರಾಷ್ಟ್ರದ ಪಾಲ್ವರ್ ಜಿಲ್ಲೆಯ ವಿರಾರ್ ನಗರದಲ್ಲಿ ಘಟನೆ ನಡೆದಿದ್ದು, ನಾಲ್ಕು ಅಂತಸ್ತಿನ ಅನಧಿಕೃತ ಅಪಾರ್ಟ್‌ಮೆಂಟ್ ಕುಸಿದಿದೆ. 15 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫ್ಲಾಟ್‌ನಲ್ಲಿದ್ದ ನಿವಾಸಿಗಳು, ಅತಿಥಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ.
50 ಫ್ಲಾಟ್‌ಗಳನ್ನು ಹೊಂದಿರುವ ‘ರಮಾಬಾಯಿ ಅಪಾರ್ಟ್‌ಮೆಂಟ್’ ಬುಧವಾರ ಮಧ್ಯಾಹ್ನ ಪಕ್ಕದಲ್ಲಿದ್ದ ಕಟ್ಟಡಗಳ ಮೇಲೆ ಕುಸಿದು ಬಿದ್ದಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸೇರಿದಂತೆ ಇತರ ರಕ್ಷಣಾ ತಂಡಗಳು ಘಟನಾ ಸ್ಥಳದಲ್ಲಿ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಸುತ್ತಿವೆ.
ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ’ ಎಂದು ಪಾಲ್ವರ್ ಜಿಲ್ಲಾಧಿಕಾರಿ ಡಾ. ಇಂದೂ ರಾಣಿ ಜಾಖರ್ ಮಾಹಿತಿ ನೀಡಿದ್ದಾರೆ. 2012ರಲ್ಲಿ ಈ ಅಪಾರ್ಟ್‌ಮೆಂಟ್ ಅನ್ನು ನಿರ್ಮಿಸಲಾಗಿತ್ತು. ಘಟನೆ ಸಂಬಂಧ ಅಪಾರ್ಟ್‌ಮೆಂಟ್ ಮಾಲೀಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.