ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸುತ್ತಿರುವ ಚುನಾವಣಾ ಆಯೋಗ, ಈ ಪ್ರಕ್ರಿಯೆಯನ್ನು ದೇಶಾದ್ಯಂತ ವಿಸ್ತರಿಸಲು ಯೋಜಿಸಿದೆ. ಆದರೆ, ಎಸ್‌ಐಆರ್ ವಿರುದ್ಧ ಬಿಹಾರ ಸೇರಿದಂತೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ, ತನ್ನ ಪ್ರಕ್ರಿಯೆಗೆ ಸಾರ್ವಜನಿಕ ಬೆಂಬಲ ಪಡೆಯಲು ಚುನಾವಣಾ ಆಯೋಗವು ಹೊಸ ಅಭಿಯಾನ ಆರಂಭಿಸಿದ್ದು, ಜನರನ್ನು ಚಿಂತನೆ ಒಳಪಡಿಸಲು ಮತ್ತು ಪ್ರತಿಕ್ರಿಯಿಸುವಂತೆ ಮಾಡಲು ಹಲವಾರು ಪ್ರಶ್ನೆಗಳನ್ನು ಜನರ ಮುಂದಿಟ್ಟಿದೆ.
ಹೊಸ ಅಭಿಯಾನದಲ್ಲಿ ಆಯೋಗವು, SIR ಪ್ರಕ್ರಿಯೆಯನ್ನು ನಡೆಸಬೇಕೇ ಮತ್ತು ಮೃತ ವ್ಯಕ್ತಿಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಬೇಕೇ ಎಂದು ಕೇಳಿದೆ.
ಎರಡು ಅಥವಾ ಹೆಚ್ಚಿನ ಸ್ಥಳಗಳಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿರುವವರ ಹೆಸರುಗಳನ್ನು ಅಳಿಸಬೇಕೇ ಮತ್ತು ಬೇರೆಡೆಗೆ ವಲಸೆ ಹೋದವರ ಹೆಸರುಗಳನ್ನು ತೆಗೆದುಹಾಕಬೇಕೇ ಎಂದು ಚುನಾವಣಾ ಆಯೊಗ ಕೇಳಿದೆ.
ಮತದಾರರ ಪಟ್ಟಿಗಳಲ್ಲಿ ಹೆಸರುಗಳು ಕಾಣಿಸಿಕೊಂಡಿರುವ ವಿದೇಶಿ ಪ್ರಜೆಗಳ ಬಗ್ಗೆ ಆಯೋಗ ಮತ್ತಷ್ಟು ಪ್ರಶ್ನೆಯನ್ನು ಎತ್ತಿದೆ. ವಿದೇಶಿ ಪ್ರಜೆಗಳ ಹೆಸರನ್ನು ಪಟ್ಟಿಯಿಂದ ಅಳಿಸಬೇಕೇ ಎಂದು ಕೇಳಿದೆ.
“ಈ ಪ್ರಶ್ನೆಗಳಿಗೆ ಜನರು ತಮ್ಮ ಉತ್ತರಗಳು ಸಕಾರಾತ್ಮಕವಾಗಿದ್ದರೆ, ಚುನಾವಣಾ ಆಯೋಗವು ನಡೆಸುವ ಈ ಕಷ್ಟಕರವಾದ ಪ್ರಕ್ರಿಯೆಗೆ ಜನರು ಸಹಕಾರ ನೀಡಬೇಕು” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.